ಬಿಲ್ಲುಗಾರಿಕೆಯಲ್ಲಿ ದಾಖಲೆ ನಿರ್ಮಿಸಿದ ಐದರ ಬಾಲೆ ಶಿವಾನಿ

ಹೈದರಾಬಾದ್, ಸೆ.12: ಐದರ ಹರೆಯದ ಪೋರಿ ಚೆರುಕುರಿ ಡೋಲಿ ಶಿವಾನಿ ಬಿಲ್ಲುಗಾರಿಕೆಯಲ್ಲಿ ಕೈಚಳಕ ತೋರಿ ಭಾರತ ಹಾಗೂ ಏಷ್ಯಾ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾಳೆ. ಈ ಸಾಧನೆಯ ಮೂಲಕ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಗಮನವನ್ನು ತನ್ನತ್ತ ಸೆಳೆದಿದ್ದಾಳೆ.
ಶಿವಾನಿ 10 ಮೀ.ದೂರದಲ್ಲಿ ನಿಂತು 11 ನಿಮಿಷ, 19 ಸೆಕೆಂಡ್‌ಗಳಲ್ಲಿ 103 ಬಾಣಗಳನ್ನು ಗುರಿ ತಲುಪಿಸಿದ್ದಾಳೆ. ಈ ಸಾಧನೆಯ ಮೂಲಕ ಭಾರತ ಹಾಗೂ ಏಷ್ಯಾದ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾಳೆ.
30 ನಿಮಿಷಗಳ ವಿಶ್ರಾಂತಿಯ ಬಳಿಕ 20 ಮೀ.ದೂರದಿಂದ ಐದು ನಿಮಿಷ, 8 ಸೆಕೆಂಡ್‌ಗಳಲ್ಲಿ 36 ಬಾಣಗಳನ್ನು ಗುರಿ ಇಡುವ ಮೂಲಕ ಒಟ್ಟು 360 ಅಂಕಗಳಲ್ಲಿ 290 ಅಂಕ ಗಳಿಸಲು ಸಫಲವಾದಳು.
‘‘ಶಿವಾನಿಯ ಪುಟ್ಟ ಕೈ ಹಾಗೂ ಭುಜವನ್ನು ಪರಿಗಣನೆಗೆ ತೆಗೆದುಕೊಂಡರೆ ಇದು ದೊಡ್ಡ ಸವಾಲಾಗಿದೆ’’ ಎಂದು ಭಾರತ ಆರ್ಚರಿ ಸಂಸ್ಥೆಯ ಅಧಿಕಾರಿ ಶರಣ್ ಕುಮಾರ್ ಹೇಳಿದ್ದಾರೆ.
ಶಿವಾನಿ ಇಂತಹ ಸಾಧನೆಯ ಮೂಲಕ ಸುದ್ದಿಯಾಗು ತ್ತಿರುವುದು ಇದೇ ಮೊದಲ ಬಾರಿಯಲ್ಲ. ಮೂರನೆ ವರ್ಷದಲ್ಲಿ ಟ್ರಯಲ್ ಸ್ಪರ್ಧೆಯಲ್ಲಿ 200ಕ್ಕೂ ಅಧಿಕ ಅಂಕವನ್ನು ಗಳಿಸಿದ ಭಾರತದ ಕಿರಿಯ ಆರ್ಚರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಳು ಎಂದು ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.
5ರ ಬಾಲಕಿ ಶಿವಾನಿ ವಿಜಯವಾಡದ ವೋಲ್ಗಾ ಆರ್ಚರಿ ಅಕಾಡಮಿಯಲ್ಲಿ ತರಬೇತಿ ನಡೆಸುತ್ತಿದ್ದಾಳೆ. 2024ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಈಗಾಗಲೇ ತಯಾರಿ ಆರಂಭಿಸಿದ್ದಾಳೆ.
‘‘2024ರ ಒಲಿಂಪಿಕ್ಸ್‌ನ ವೇಳೆಗೆ ಶಿವಾನಿಗೆ 13 ವರ್ಷ ವಾಗುತ್ತದೆ. ಆಕೆಯನ್ನು ಒಲಿಂಪಿಕ್ಸ್‌ಗೆ ತಯಾರಿಗೊಳಿಸುವುದು ನಮ್ಮ ಗುರಿ. ಸುಧಾರಿತ ತಂತ್ರಜ್ಞಾನದ ಮೂಲಕ ಆರ್ಚರಿ ಕಲಿಸಿಕೊಡಲು ನಮಗೆ ಉನ್ನತದರ್ಜೆಯ ಕೋಚ್‌ಗಳ ಅಗತ್ಯವಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಮ್ಮ ಮನವಿಯನ್ನು ಪುರಸ್ಕರಿಸಿ ಅಗತ್ಯದ ನೆರವು ನೀಡುವ ವಿಶ್ವಾಸವಿದೆ’’ ಎಂದು ಶಿವಾನಿಯ ತಂದೆ ಸಿ. ಸತ್ಯನಾರಾಯಣ ಹೇಳಿದ್ದಾರೆ.
2004ರಲ್ಲಿ ಅಪಘಾತದಲ್ಲಿ ಮೃತಪಟ್ಟ ಪುತ್ರಿ ಸ್ಮರಣಾರ್ಥ ಸತ್ಯನಾರಾಯಣ ವೋಲ್ಗಾ ಅಕಾಡಮಿ ನಡೆಸುತ್ತಿದ್ದಾರೆ. ಸತ್ಯನಾರಾಯಣರ ಪುತ್ರ ಸಿ.ಲೆನಿನ್ ಅಂತಾರಾಷ್ಟ್ರೀಯ ಮಟ್ಟದ ಆರ್ಚರಿ ಆಗಿದ್ದರು. 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಭಾರತದ ಕಾಂಪೌಂಡ್ ತಂಡದ ಕೋಚ್ ಆಗಿದ್ದರು. ಆದರೆ, ಲೆನಿನ್ ಕೂಡ ವಿಜಯವಾಡದಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದರು. ಆರ್ಚರಿ ತಂಡದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿತ್ತು.







