ಕಶ್ಯಪ್, ಅಶ್ವಿನಿ-ಸಾತ್ವಿಕ್ ಪ್ರಧಾನ ಸುತ್ತಿಗೆ
ಕೊರಿಯಾ ಓಪನ್

ಸಿಯೋಲ್, ಸೆ.12: ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪಿ.ಕಶ್ಯಪ್ ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಸಿರೀಸ್‌ನಲ್ಲಿ ಮಂಗಳವಾರ ಪ್ರಧಾನ ಸುತ್ತು ತಲುಪಿದ್ದಾರೆ.
ಪಿ.ಕಶ್ಯಪ್ ಅವರು ಚೈನಾ ತೈಪೆಯ ಲಿನ್ ಯು ಸಿಯೆನ್ ಮತ್ತು ಕಾನ್ ಚಾವೊ ಯು ವಿರುದ್ಧ ಜಯ ಗಳಿಸಿ ಪ್ರಧಾನ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡರು.
ಯುಎಸ್ ಓಪನ್ ಗ್ರಾನ್ ಪ್ರಿ ಗೋಲ್ಡ್‌ನಲ್ಲಿ ಎರಡನೆ ಸ್ಥಾನ ಪಡೆದಿದ್ದ ಕಶ್ಯಪ್ ಅವರು ಚೈನಾ ತೈಪೆಯ ಲಿನ್ ಯು ವಿರುದ್ಧ ಮೊದಲ ಅರ್ಹತಾ ಸುತ್ತಿನ ಪಂದ್ಯದಲ್ಲಿ 21-19, 21-9 ಅಂತರದಲ್ಲಿ ಜಯ ಗಳಿಸಿದರು. ಎರಡನೆ ಅರ್ಹತಾ ಪಂದ್ಯದಲ್ಲಿ ತೈವಾನ್‌ನ ಕಾನ್ ಚವೊ ಯು ವಿರುದ್ಧ 21-19, 21-18 ಅಂತರದಲ್ಲಿ ಜಯ ಗಳಿಸಿದರು.
ಕಶ್ಯಪ್ ಪ್ರಮುಖ ಸುತ್ತಿನ ಪಂದ್ಯದಲ್ಲಿ ಚೀನಾ ತೈಪೆಯ ಸೂ ಜೆನ್ ಹಾವೊ ರನ್ನು ಎದುರಿಸುವರು. ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್ ರಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಎರಡು ಗೆಲುವಿನೊಂದಿಗೆ ಪ್ರಧಾನ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಅವರು ಜರ್ಮನಿಯ ಪೀಟರ್ ಕಾಸ್ಬಾಯರ್ ಮತ್ತು ಓಲ್ಗಾಕೊನನ್ ವಿರುದ್ಧ 21-12, 21-15 ಅಂತರದಲ್ಲಿ ಜಯ ಗಳಿಸಿದರು. ಎರಡನೆ ಪಂದ್ಯದಲ್ಲಿ ಇಂಡೋನೇಷ್ಯಾದ ರೊನಾಲ್ಡ್ ಮತ್ತು ಅನ್ನಿಸಾ ಸಾಫಿಕಾ ವಿರುದ್ಧ 27-25, 21-17 ಅಂತರದಲ್ಲಿ ಜಯ ಸಾಧಿಸಿದರು.
ಅಶ್ವಿನಿ ಮತ್ತು ಸಾತ್ವಿಕ್‌ಗೆ ಪ್ರಧಾನ ಸುತ್ತಿನಲ್ಲಿ ಹಾಂಕಾಂಗ್‌ನ ಟ್ಯಾಂಗ್ ಚುನ್ ಮ್ಯಾನ್ ಮತ್ತು ಟ್ಸೆ ಯಿಂಗ್ ಸುಯೆಟ್ ಸವಾಲು ಎದುರಾಗಲಿದೆ.
ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಎನ್. ಸಿಕ್ಕಿ ರೆಡ್ಡಿ ಸೋಲು ಅನುಭವಿಸಿದ್ದಾರೆ. ಅವರು ಇಂಡೋನೇಷ್ಯಾದ ಪ್ರವೀಣ್ ಜೋರ್ಡನ್ ಮತ್ತು ದೆಬೈ ಸುಸಾಂತೊ ವಿರುದ್ಧ 21-13, 19-21, 15-21 ಅಂತರದಲ್ಲಿ ಸೋಲು ಅನುಭವಿಸಿದರು.







