ಅಧ್ಯಕ್ಷರ ಇಲೆವೆನ್ ವಿರುದ್ಧ ಆಸ್ಟ್ರೇಲಿಯಕ್ಕೆ ಜಯ
ಅಭ್ಯಾಸ ಪಂದ್ಯ
ಚೆನ್ನೈ, ಸೆ.12: ಅಧ್ಯಕ್ಷರ ಇಲೆವೆನ್ ವಿರುದ್ಧ ಪಂದ್ಯವನ್ನು 103 ರನ್‌ಗಳ ಅಂತರದಿಂದ ಗೆದ್ದುಕೊಂಡಿರುವ ಆಸ್ಟ್ರೇಲಿಯ ತಂಡ ಭಾರತದ ಪ್ರವಾಸವನ್ನು ಭರ್ಜರಿಯಾಗಿ ಆರಂಭಿಸಿದೆ.
ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ ಗೆಲ್ಲಲು 348 ರನ್ ಗುರಿ ಪಡೆದಿದ್ದ ಅಧ್ಯಕ್ಷರ ಇಲೆವೆನ್ ತಂಡ 48.2 ಓವರ್‌ಗಳಲ್ಲಿ 244 ರನ್ ಗಳಿಸಿ ಆಲೌಟಾಯಿತು.
ಅಧ್ಯಕ್ಷರ ಇಲೆವೆನ್ ಆರಂಭಿಕ ಆಟಗಾರ ರಾಹುಲ್ ತ್ರಿಪಾಠಿ(7) ಅವರನ್ನು ಬೇಗನೆ ಕಳೆದುಕೊಂಡಿತು. ಆಗ 2ನೆ ವಿಕೆಟ್‌ಗೆ 79 ರನ್ ಜೊತೆಯಾಟ ನಡೆಸಿದ ನಿತಿಶ್ ರಾಣಾ(19) ಹಾಗೂ ನಾಯಕ ಗುರುಕೀರತ್ ಮಾನ್(27) ತಂಡವನ್ನು ಆಧರಿಸಿದರು. 9ನೆ ವಿಕೆಟ್‌ಗೆ 55 ಎಸೆತಗಳಲ್ಲಿ 66 ರನ್ ಜೊತೆಯಾಟ ನಡೆಸಿದ ಕುಶಾಂಗ್ ಪಟೇಲ್(41) ಹಾಗೂ ಅಕ್ಷಯ್ ಕಾರ್ನೆವರ್(40,2 ಬೌಂಡರಿ, 4 ಸಿಕ್ಸರ್) ಸ್ಟೇಡಿಯಂನಲ್ಲಿ ನೆರೆದಿದ್ದ 2000ರಷ್ಟಿದ್ದ ಪ್ರೇಕ್ಷಕರನ್ನು ರಂಜಿಸಿದರು.
ಆಸ್ಟ್ರೇಲಿಯದ ಪರ ಎಡಗೈ ಸ್ಪಿನ್ನರ್ ಆಸ್ಟನ್ ಅಗರ್(4-44) ಯಶಸ್ವಿ ಬೌಲರ್ ಎನಿಸಿಕೊಂಡರು. ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 347 ರನ್ ಗಳಿಸಿತ್ತು. ಡೇವಿಡ್ ವಾರ್ನರ್(64) ಹಾಗೂ ಸ್ಟೀವನ್ ಸ್ಮಿತ್(55) 2ನೆ ವಿಕೆಟ್‌ಗೆ 107 ರನ್ ಜೊತೆಯಾಟ ನಡೆಸಿದರು.
ಆಸೀಸ್ 29ನೆ ಓವರ್‌ನಲ್ಲಿ 158 ರನ್‌ಗೆ 4 ವಿಕೆಟ್ ಕಳೆದುಕೊಂಡಿತ್ತು. ಆಗ 5ನೆ ವಿಕೆಟ್‌ಗೆ 88 ರನ್ ಸೇರಿಸಿದ ಟ್ರೆವಿಸ್ ಹೆಡ್(65) ಹಾಗೂ ಮಾರ್ಕಸ್ ಸ್ಟೊನಿಸ್(76) ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಈ ಇಬ್ಬರು ಆಟಗಾರರು ಬೇರ್ಪಟ್ಟ ಬಳಿಕ ತಂಡದ ಬ್ಯಾಟಿಂಗ್‌ಗೆ ಮತ್ತಷ್ಟು ಬಲ ನೀಡಿದ ಮ್ಯಾಥ್ಯೂ ವೇಡ್(45) ಕೊನೆಯ 5 ಓವರ್‌ಗಳಲ್ಲಿ 68 ರನ್ ಕಲೆ ಹಾಕಿ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದರು.
ಆತಿಥೇಯ ಪರ ಕುಶಾಂಗ್(2-58) ಹಾಗೂ ವಾಶಿಂಗ್ಟನ್ ಸುಂದರ್(2-23) ತಲಾ ಎರಡು ವಿಕೆಟ್ ಕಬಳಿಸಿದರು.







