ಕರ್ನಾಟಕದ ಒಳಪಿನ ರೇಷ್ಮೆಗೆ ಜಾಗತಿಕ ಬೇಡಿಕೆ : ಹನುಮಂತರಾಯಪ್ಪ
ತುಮಕೂರು,ಸೆ.12:ಜಾಗತಿಕ ಮಾರುಕಟ್ಟೆಯಲ್ಲಿ ದೇಶದ ಅದರಲ್ಲೂ ಕರ್ನಾಟಕದಲ್ಲಿ ಉತ್ಪಾಧಿಸುವ ಒಳಪಿನ ರೇಷ್ಮೆಗೆ ಹೆಚ್ಚಿನ ಬೇಡಿಕೆ ಇದೆ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಹೇಳಿದ್ದಾರೆ.
ರೇಷ್ಮೆ ಸಂಶೋಧನಾ ವಿಸ್ತರಣಾ ಉಪ ಘಟಕ ತುಮಕೂರು, ಕೇಂದ್ರ ರೇಷ್ಮೆ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ಮೈಸೂರು, ಕೇಂದ್ರ ರೇಷ್ಮೆ ಮಂಡಳಿ ಹಾಗೂ ರೇಷ್ಮೆ ಇಲಾಖೆ ಸಹಯೋಗದಲ್ಲಿ ತುಮಕೂರು ತಾಲೂಕಿನ ಹುಳ್ಳೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಗುಣಮಟ್ಟದ ದ್ವಿತಳಿ ಗೂಡ ಉತ್ಪಾದನೆ, ವಿಜ್ಞಾನಿ ಮತ್ತು ರೈತರೊಂದಿಗೆ ವಿಶೇಷ ಜ್ಞಾನಾರ್ಜನೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದ ಅವರು,ಚೀನಾ ರೇಷ್ಮೆಗೆ ಹೊಲಿಕೆ ಮಾಡಿದರೆ ಮಾರುಕಟ್ಟೆಯಲ್ಲಿ ದೇಶದ ರೇಷ್ಮೆಗೆ ಹೆಚ್ಚು ಬೇಡಿಕೆಯಿದ್ದು,ಅದರಲ್ಲಿಯೂ ಕರ್ನಾಟಕದ ಮಿಶ್ರತಳಿ ಗೂಡುಗಳಿಂದ ಉತ್ಪಾಧಿಸುವ ಹೊಳಪಿನ ರೇಷ್ಮೆಗೆ ಎಲ್ಲಿಲ್ಲದೆ ಬೇಡಿಕೆಯಿದೆ ಎಂದರು.
ರೈತರು ರೇಷ್ಮೆ ಕೃಷಿಗೆ ಆದ್ಯತೆ ನೀಡಬೇಕು.ವರ್ಷದ 365 ದಿನವೂ ಲಾಭ ತಂದುಕೊಂಡುವ ಏಕೈಕ ಬೆಳೆ ರೇಷ್ಮೆ ಕೃಷಿಯಿಂದ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ.ರೈತರು ಮುಖ್ಯ ಬೆಳೆ, ಉಪ ಬೆಳೆ ಜೊತೆಗೆ ಉಪ ಕಸುಬವನ್ನು ಕೃಷಿಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಆದಾಯ ದ್ವಿಗಣಗೊಳ್ಳಲಿದೆ.ರಾಜ್ಯ ಹಾಗೂ ಕೇಂದ್ರ ಸರಕಾರ ರೇಷ್ಮೆ ಕೃಷಿಕರಿಗೆ ಉಚಿತ ತರಬೇತಿ, ಅಧ್ಯಯನ ಪ್ರವಾಸ, ಕ್ಷೇತ್ರ ಭೇಟಿ, ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಹೆಚ್ಚು ಆಯೋಜಿಸುವುದರ ಜೊತೆಗೆ ವಿವಿಧ ಯೋಜನೆಗಳ ಮೂಲಕ ಪ್ರೋತ್ಸಾಹಧನ ನೀಡುತ್ತಿದ್ದು,ರೈತರು ಇವುಗಳ ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಆಧುನಿಕ ಬೇಸಾಯ ಪದ್ಧತಿ ಹಾಗೂ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಹನುಮಂತರಾಯಪ್ಪ ಸಲಹೆ ನೀಡಿದರು.
ದೇಶದಲ್ಲಿ ರೇಷ್ಮೆಗೆ ಬೇಡಿಕೆ ಹೆಚ್ಚಿರುವುದರಿಂದ ಚೀನಾ ಸೇರಿದಂತೆ ಇತರೆ ದೇಶಗಳಲ್ಲಿ ರೇಷ್ಮೆ ಆಮದು ಮಾಡಿಕೊಳ್ಳಲಾಗುತ್ತಿದೆ. ನಮ್ಮ ರೈತರು ಸರಕಾರ ನೀಡುತ್ತಿರುವ ಸೌಲಭ್ಯ ಹಾಗೂ ಹೊಸ ಪದ್ಧತಿ ಅಳವಡಿಸಿಕೊಂಡು ರೇಷ್ಮೆ ಉತ್ಪಾದನೆ ಹೆಚ್ಚಿಸುವ ಮೂಲಕ ಆಮದು ಪ್ರಮಾಣವನ್ನು ಸಂಪೂರ್ಣವಾಗಿ ನಿಲ್ಲಿಸಲು ಪಣತೊಡಬೇಕು.ದೇಶದಲ್ಲಿ ಪ್ರಸ್ತುತ ಸರಾಸರಿ 100 ಮೊಟ್ಟಗೆ 80 ರಿಂದ 85 ಕೆಜಿ ರೇಷ್ಮೆ ಉತ್ಪಾದನೆಯಾಗುತ್ತಿದೆ. ಸಣ್ಣ ಹಾಗೂ ಅತೀ ಸಣ್ಣ ರೈತರು ರೇಷ್ಮೆ ಕೃಷಿ ಅನುಸರಿಸಿ ಹೆಚ್ಚು ಲಾಭ ಪಡೆಯಬಹುದು. ಪ್ರಸ್ತುತ ಎಕರೆಗೆ ವರ್ಷಕ್ಕೆ ಕನಿಷ್ಟ 2.5 ಲಕ್ಷದಿಂದ 4 ಲಕ್ಷದ ವರೆಗೆ ಸಂಪಾದನೆ ಮಾಡಬಹುದು.ಎಕರೆಗೆ 5000 ಸಾವಿರ ಸಸಿ ನೆಟ್ಟರೆ ವರ್ಷಕ್ಕೆ 3 ಲಕ್ಷ ಲೀಟರ್ ನೀರಿನ ಅಗತ್ಯವಿದೆ.ಅದೇ ಭೂಮಿಯಲ್ಲಿ ವಿನೂತನ ಏಕ ಕಾಂಡ ಪದ್ಧತಿಯಲ್ಲಿ ಎಕರೆಗೆ 400 ರಿಂದ 480 ಸಸಿ ನೆಟ್ಟರೆ 30 ಸಾವಿರ ಲೀಟರ್ ನೀರು ಸಾಕು. ಸಸಿ ಪ್ರಮಾಣ ಕಡಿಮೆ ಮಾಡುವುದರಿಂದ ಉತ್ಪಾದನೆ ಹೆಚ್ಚುಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ ಎಂದು ಸಲಹೆ ನೀಡಿದರು.
ವಿಜ್ಞಾನಿ ಹುಲುನಾಚೇಗೌಡ ಮಾತನಾಡಿ, ರೇಷ್ಮೆ ಕೃಷಿ ಎಲ್ಲಾ ಪ್ರದೇಶಗಳಲ್ಲೂ ಲಾಭ ತಂದುಕೊಡುವ ಬೆಳೆ, ರೇಷ್ಮೆಯೊಟ್ಟಿಗೆ, ಕುರಿ,ಮೇಕೆ, ಕೋಳಿಯಂತಹ ಸಾಕು ಪ್ರಾಣಿಗಳನ್ನು ಸಾಕುವುದು,ತರಕಾರಿ ಬೆಳೆ ಬೆಳೆಯುವುದರಿಂದ ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬಹುದು ಎಂದರು.
ಆರ್‍ಸಿಇ ಉಪ ಘಟಕದ ಹಿರಿಯ ವಿಜ್ಞಾನಿ ಕೆ.ವೇದವ್ಯಾಸ ಮಾತನಾಡಿ, ರೈತರು ಯಾವುದೇ ಬೆಳೆ ಬೆಳೆಯುವ ಮುನ್ನ ತಮ್ಮ ಭೂಮಿಯ ಮಣ್ಣಿನ ಪರೀಕ್ಷೆ ಮಾಡಿಸಿ, ಅದರಲ್ಲಿ ಖನಿಜಾಂಶ, ಲಾವಣಾಂಶ ಹಾಗೂ ಉಪ್ಪಿನ ಪ್ರಮಾಣ ಎಷ್ಟಿದೆ ಎಂಬುದನ್ನ ಅರಿಯಬೇಕು.ಆ ನಂತರವೇ ಅ ಭೂಮಿಯನ್ನ ಫಲವತ್ತಾಗಿಸುವ ಕ್ರಿಯೆ ಆರಂಭಿಸಬೇಕು. ಮೈಸೂರು ಹಾಗೂ ತುಮಕೂರು ಕೇಂದ್ರಗಳಲ್ಲಿ ಉಚಿತವಾಗಿ ನಿಮ್ಮ ಭೂಮಿಯ ಮಣ್ಣಿನ ಪರೀಕ್ಷೆ ಮಾಡಿಕೊಡುತ್ತೇವೆ. ಆದರಷ್ಟು ಬೆಳೆ ಕಟಾವು ಮಾಡಿದ ನಂತರವೇ ಮಣ್ಣನ್ನ ಪರೀಕ್ಷೆ ನೀಡಿ ಸೌಲಭ್ಯ ಸದುಪಯೋಗಿಸಿಕೊಳ್ಳಿ ಎಂದರು.
ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣ ಮಾತನಾಡಿ,ದೇಶದ ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಯೋಜನೆ ಜಾರಿಗೆ ತರುತ್ತಿದೆ. ರೈತರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಭೂಮಿ, ನೀರು, ವಿದ್ಯುತ್, ಕಾರ್ಮಿಕರು ದ್ವಿಗುಣವಾಗುವುದಿಲ್ಲ. ಬದಲಾಗಿ ತಮ್ಮ ಬೆಳೆ ಪದ್ಧತಿ ಮತ್ತು ನಿರ್ವಹಣೆಯಲ್ಲಿ ಸುಧಾರಣೆ ಮಾಡಿಕೊಳ್ಳುವ ಮೂಲಕ ಇರುವ ಸೌಲಭ್ಯ, ಭೂಮಿಯಲ್ಲೇ ಎರಡುಪಟ್ಟು ಆದಾಯ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ತಾಪಂ ಸದಸ್ಯೆ ಆಶಾ,ಗ್ರಾಪಂ ಅಧ್ಯಕ್ಷೆ ಸುನಂದಮ್ಮ, ಉಪಾಧ್ಯಕ್ಷ ಎ.ಶಶಿಕಿರಣ್,ರೇಷ್ಮೆ ಇಲಾಖೆ ಉಪನಿರ್ದೇಶಕ ಚಂದ್ರು, ಆರ್‍ಎಸ್‍ಆರ್‍ಎಸ್, ಸಿಎಸ್‍ಬಿ ಕೊಡೆತಿಯ ಹಿರಿಯ ವಿಜ್ಞಾನಿ ಡಾ.ಜಲಜಾ ಎಸ್.ಕುಮಾರ್, ಹಿರಿಯ ವಿಜ್ಞಾನಿಗಳಾದ ಡಾ.ಅಶ್ವತ್ಥರೆಡ್ಡಿ, ಪಾರ್ಥಸಾರಥಿ, ಡಾ.ವಿಜಯಕುಮಾರ್, ಡಾ.ಮುಕುಂದ್ ಕಿರಸೂರ್ ಹಾಗೂ ರೇಷ್ಮೆ ಕೃಷಿಕರು ಭಾಗವಹಿಸಿದ್ದರು.







