Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಚಿನ್ನ ಬಡ ಮಹಿಳೆಯರ ಕಿವಿಗಳನ್ನೇರಿ...

ಚಿನ್ನ ಬಡ ಮಹಿಳೆಯರ ಕಿವಿಗಳನ್ನೇರಿ ಅಳುವಂತಾಯ್ತು

ಚಂದ್ರಕಲಾ ನಂದಾವರಚಂದ್ರಕಲಾ ನಂದಾವರ13 Sept 2017 12:25 AM IST
share
ಚಿನ್ನ ಬಡ ಮಹಿಳೆಯರ ಕಿವಿಗಳನ್ನೇರಿ ಅಳುವಂತಾಯ್ತು

ಕುಡಿತ ಎನ್ನುವುದು ಮಾನಸಿಕ ದಾಸ್ಯ ಎನ್ನುವುದು ವ್ಯಕ್ತಿಗತವಾದಂತೆಯೇ ಅದರ ಕಾರಣಗಳ ಶೋಧಗಳಲ್ಲಿ ಅದರ ಹೊಣೆಯನ್ನು ಕುಟುಂಬಿಕರು ಮಾತ್ರವಲ್ಲ, ಸಮುದಾಯ, ಒಟ್ಟು ಸಮಾಜವು ಹೊರಬೇಕಾಗಿದೆ ಎನ್ನುವುದು ವೈದ್ಯರು ನೀಡುವ ತಿಳುವಳಿಕೆಯಿಂದ ಸಾಬೀತು ಆಗುತ್ತದೆ. ವ್ಯಕ್ತಿಗೆ ಕೌಟುಂಬಿಕವಾಗಿ ದೊರೆಯುವ ಪ್ರೀತಿ, ಗೌರವಗಳಂತೆಯೇ, ಆತನ ವೃತ್ತಿಗೆ, ಕುಲಕಸುಬಿಗೆ ಸಿಗುವ ಗೌರವ ಮನ್ನಣೆಗಳು ಕೂಡಾ ಆತನನ್ನು ಆ ದುಶ್ಚಟದಿಂದ ಬಿಡಿಸಬಲ್ಲುದು ಎನ್ನುವುದಕ್ಕೆ ಇಂದು ಇರುವ ಅನೇಕ ಸಾಮಾಜಿಕ ಸೇವಾ ಸಂಘಗಳು ಸಾಕ್ಷಿಯಾಗಿವೆ. ಸಾಕ್ಷರತಾ ಆಂದೋಲನದ ವೇಳೆಯಲ್ಲಿ ಮದ್ಯಪಾನದ ಕುರಿತಾಗಿ ನೀಡಿದ ಜಾಗೃತಿ ಕಾರ್ಯಕ್ರಮಗಳೂ, ಅದರಿಂದ ಉಪಕೃತರಾಗಿ, ವ್ಯಸನ ಮುಕ್ತರಾದ ಅನೇಕ ಹಿರಿಯರು ಸಮಾಜಕ್ಕೆ ಮಾದರಿಯಾದ ಉದಾಹರಣೆಗಳೂ ನನ್ನ ಮುಂದೆ ಇದೆ.

ಆದರೂ ಈ ಸಾಮಾಜಿಕ ಪಿಡುಗನ್ನು ನಿವಾರಿಸುವಲ್ಲಿ ಸರಕಾರದ ಇಚ್ಛಾಶಕ್ತಿಯೇ ಪ್ರಬಲವಾದುದು. ಆದರೆ ರಾಜಕೀಯದ ಆಟಕ್ಕೆ ಇಂತಹ ಸಾಮಾಜಿಕ ಸಮಸ್ಯೆಗಳು ದಾಳಗಳಾಗಿರುವುದು ಕೂಡಾ ಅಷ್ಟೇ ಸತ್ಯ. ಸಮಾಜದ ಸ್ವಾಸ್ಥ ಎಂದರೆ ದೇಶದ ಸ್ವಾಸ್ಥ. ಸಮಾಜದ ಮಾನಸಿಕ ನೆಮ್ಮದಿ. ಈ ಹಿನ್ನೆಲೆಯಲ್ಲಿ ಮಹಿಳೆಯರು ಸಂಸ್ಕೃತಿಯ ಹೊಣೆಗಾರಿಕೆ, ಸಂಪ್ರದಾಯದ ಹೊಣೆಗಾರಿಕೆ ಎನ್ನುವ ಹಿನ್ನೆಲೆಯಲ್ಲಿ ಮದ್ಯಪಾನ ಮುಕ್ತ ಕುಟುಂಬ, ಮದ್ಯಪಾನ ಮುಕ್ತ ಸಮಾಜದ ನಿರ್ಮಾಣವೇ ಹೊರತು ಪೂಜೆ, ಪುನಸ್ಕಾರ, ವ್ರತಗಳಿಂದ ಅವರ ಕುಟುಂಬದ ಪುರುಷರು ಮದ್ಯಪಾನ ತ್ಯಜಿಸುತ್ತಾರೆ ಎನ್ನುವುದರಲ್ಲಿ ಸತ್ಯವಿದೆ ಎಂಬುದಕ್ಕೆ ನನಗೆಂದೂ ಉದಾಹರಣೆಗಳು ಸಿಕ್ಕಿಲ್ಲ. ನನ್ನ ಮನೆಯ ನೆರೆಯಲ್ಲೇ ನೀರು ಹರಿಯುವ ತಗ್ಗಿನ ಖಾಲಿ ಜಾಗದಲ್ಲಿ ಮನೆ ಕಟ್ಟಿಕೊಂಡ ಎರಡು ಮನೆಗಳಿದ್ದವು. ಅವುಗಳಲ್ಲಿ ಒಂದು ಮನೆಯ ಯಜಮಾನ ಕೂಲಿ ಕಾರ್ಮಿಕ.

ಕೂಲಿ ಕಾರ್ಮಿಕರೆಂದರೆ ಮದ್ಯಪಾನ ಮಾಡುವವರೇ ಎಂಬುದು ರೂಢಿಯೆಂಬಂತೆ ನನ್ನ ತಿಳುವಳಿಕೆಗೆ ಕಾರಣ ಅವರು ಹಾಗಿದ್ದುದೇ ಆಗಿತ್ತು. ಈ ಮನೆಯ ಯಜಮಾನ ಶಬರಿಮಲೆಗೆ ಹರಕೆ ಹೊತ್ತುಕೊಂಡು ಮೂರು ತಿಂಗಳು ಕಪ್ಪು ವಸ್ತ್ರ ಧರಿಸಿ, ಹೆಂಡತಿಯ ಸಂಗ ತೊರೆದು ಬ್ರಹ್ಮಚರ್ಯ ವ್ರತ ಪಾಲಿಸಿಕೊಂಡು, ಸಸ್ಯಾಹಾರಿಯಾಗಿ, ಮದ್ಯಪಾನ ಮಾಡದೆ, ಮಕರ ಸಂಕ್ರಾತಿಯ ವೇಳೆ ಶಬರಿಮಲೆಗೆ ಪಾದಯಾತ್ರೆ ಮಾಡಿ ಹಿಂದಿರುಗುತ್ತಾರೆ. ಇದು ಅನೇಕ ವರ್ಷಗಳಲ್ಲಿ ಅವರು ನಡೆಸಿದ ಒಂದು ಸಂಪ್ರದಾಯ. ಆದರೆ ವ್ರತ ಮುಗಿದ ಬಳಿಕ ಅವರ ಸಸ್ಯಾಹಾರ ವ್ರತವೂ, ಮದ್ಯಪಾನ ನಿಷೇಧವೂ ಮರೆತು ಹೋಗಿ ರಾತ್ರಿಯಲ್ಲಿ ಹೆಂಡತಿಯೊಡನೆ ಜಗಳವಾಡುವ ಸ್ಥಿತಿ ಹಾಗೆಯೇ ಉಳಿದರೆ ಈ ಧಾರ್ಮಿಕ ಸಂಸ್ಕಾರಕ್ಕೆ ಬೆಲೆಯಾದರೂ ಎಲ್ಲಿ ಉಳಿಯುತ್ತದೆ? ಆದ್ದರಿಂದಲೇ ನಾನು ಮದ್ಯಪಾನ ತ್ಯಜಿಸಲು ದೇವರ ಭಯವೂ ಪರಿಣಾಮಕಾರಿ ಚಿಕಿತ್ಸೆ ಅಲ್ಲ ಎಂದು ತಿಳಿದಿರುವುದು.

ಇದೇ ಕುಡಿತದ ಚಟದ ಇನ್ನೊಂದು ಉದಾಹರಣೆಯು ನನ್ನ ಕಣ್ಣೆದುರಿಗೇ ಇದೆ. ಆ ಮನೆಯ ಯಜಮಾನನೂ ಕೂಲಿ ಕಾರ್ಮಿಕ. ತಾನು ದುಡಿದು ಸಂಪಾದಿಸಿದುದರಲ್ಲಿ ಅರ್ಧಕ್ಕೂ ಹೆಚ್ಚು ಪಾಲು ಗಡಂಗಿಗೆ ನೀಡುವಾತ. ಕುಡಿದು ನಿತ್ರಾಣನಾದಾಗ ಕೆಲಸಕ್ಕೆ ಹೋಗದ ಸೋಮಾರಿ. ಆಗ ಹೆಂಡತಿಗೆ ಹೊಡೆದು ಬಡಿದು ಅವಳು ಬೀಡಿ ಸೂಪ್‌ನ ಅಡಿಯಲ್ಲಿ ಅಡಗಿಸಿಟ್ಟ ರೂಪಾಯಿಗಳನ್ನು ಕದ್ದು ಕೊಂಡು ಹೋಗಿ ಮತ್ತೆ ಕುಡಿದು ಮನೆಗೆ ಬರುತ್ತಿದ್ದ. ಇಂತಹ ಸಂದರ್ಭದಲ್ಲಿ ಆ ಮನೆಯ ಹೆಂಗಸು ನನ್ನ ಬಳಿ ಬಂದು ಒಂದು ಕೋರಿಕೆ ಇಟ್ಟಳು. ಅದೇನೆಂದರೆ ಅವಳು ದುಡಿದ ಹಣ ನನ್ನಲ್ಲಿ ಜೋಪಾನ ಮಾಡಿ ಇಟ್ಟುಕೊಳ್ಳುವಂತೆ. ನಾನು ಅವಳಿಗೆ ಅವಳ ಉಳಿತಾಯದ ಹಣ ಸುರಕ್ಷಿತವಾಗುವುದರೊಂದಿಗೆ ಬಡ್ಡಿಯೂ ದೊರೆಯುವಂತೆ ಅವಳ ಹೆಸರಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು ವ್ಯವಹರಿಸುವುದನ್ನು ಕಲಿಸಿ ಕೊಟ್ಟೆ. ಇದು ಅವಳ ಪಾಲಿಗೆ ಬಹು ದೊಡ್ಡ ವರವಾಗಿ ಮಗನ ವಿದ್ಯಾಭ್ಯಾಸಕ್ಕೆ ಒದಗಿತು ಎನ್ನುವುದು, ಇಂದು ಆ ಮನೆ ಮಂದಿ ಶಕ್ತರಾಗುವುದಕ್ಕೆ ಕಾರಣವಾಯಿತು ಎನ್ನುವುದು ನನ್ನ ತೃಪ್ತಿಯ ವಿಷಯ.

ಇದೇ ಸಂದರ್ಭದಲ್ಲಿ ಕೇಂದ್ರ ಸರಕಾರದಲ್ಲಿ ವಿತ್ತ ಸಚಿವರಾಗಿದ್ದ ಮಂಗಳೂರಿನ ಜನಾರ್ದನ ಪೂಜಾರಿಯವರ ಸಾಲ ಮೇಳವೂ ಅಲ್ಲಲ್ಲಿ ನಡೆದು ಮಹಿಳೆಯರು ಬ್ಯಾಂಕುಗಳಲ್ಲಿ ಖಾತೆ ತೆರೆಯುವ ಯೋಜನೆ ಜಾರಿಗೆ ಬಂತು. ಆ ಮೂಲಕ ಸ್ವಯಂ ಉದ್ಯೋಗಕ್ಕೆ ಎಂಬುದಾಗಿ ಒಂದು ಸಾವಿರ ರೂಪಾಯಿ ಸಾಲದ ರೂಪದಲ್ಲಿ ನೀಡಿಕೆಯ ಸಾಧ್ಯತೆಯೂ ಆಯ್ತು. ಬೀಡಿ ಕಟ್ಟುವ, ಕೋಳಿ ಸಾಕುವ, ತರಕಾರಿ ಬೆಳೆಸುವ, ಹಪ್ಪಳ ಸಂಡಿಗೆ ಮಾಡುವ, ಉಪ್ಪಿನಕಾಯಿ ಮಾಡುವ, ಚಕ್ಕುಲಿ, ಉಂಡೆ ಮಾಡುವ, ದನ ಸಾಕುವ ಹೀಗೆ ಎಲ್ಲಾ ಜಾತಿ, ಧರ್ಮಗಳ ಹೆಂಗಸರು ಇದರ ಪ್ರಯೋಜನ ಪಡೆದದ್ದೂ ನಿಜ. ಹಾಗೆಯೇ ಈ ಎಲ್ಲಾ ಮಹಿಳೆಯರು ಸಾಲ ಮನ್ನಾ ಮಾಡಲು ಬೇಡಲಿಲ್ಲ. ಸಾಲ ಪಾವತಿಸಿ ಗೌರವ ಉಳಿಸಿಕೊಂಡವರು.

ಆದರೆ ಇವರಿಗೆ ಸಾಲ ನೀಡಿಸಿದ ಪುರುಷ ದಲ್ಲಾಳಿಗಳು, ಕೆಲವೆಡೆ ಬ್ಯಾಂಕ್ ಸಿಬ್ಬಂದಿ ಈ ಮಹಿಳೆಯರಿಂದ ತಾವು ನೀಡಿದ ನೆರವಿಗೆ ಕಮಿಶನ್ ರೂಪದಲ್ಲಿ ಲಂಚ ಪಡೆದ ಉದಾಹರಣೆಗಳು ಸಾಕಷ್ಟು ಇದ್ದುದೂ ನಿಜವೇ. ಮಹಿಳೆಯರಿಗೆ ಈ ರೀತಿ ಸಾಲ ನೀಡುವ ಈ ಯೋಜನೆಯ ಬಗ್ಗೆ ಬಸ್ಸುಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಸ್ಟಾಫ್ ರೂಮಲ್ಲಿ, ಸರಕಾರಿ ಕಚೇರಿಗಳಲ್ಲಿ ಚರ್ಚೆ ನಡೆದುದೂ ವಾಸ್ತವವೇ. ಈ ಚರ್ಚೆಯ ವಿಷಯದಲ್ಲಿ ಮುಖ್ಯವಾದ ಅಂಶ ಬಹುತೇಕ ಮಹಿಳೆಯರು ಅಬ್ರಾಹ್ಮಣರು, ಶೂದ್ರರು, ದಲಿತರು. ಅವರು ಫಲಾನುಭವಿಗಳಾದುದನ್ನು ಇಷ್ಟಪಡದ ಪುರುಷ ವರ್ಗ. ಇನ್ನೊಂದು ವಿಷಯ ಮಹಿಳೆಯರೆಲ್ಲರೂ ಬ್ಯಾಂಕಿನಿಂದ ಸಾಲ ಪಡೆದು ನೇರವಾಗಿ ಜ್ಯುವೆಲ್ಲರ್ಸ್‌ ಶಾಪ್‌ಗಳಲ್ಲಿ ಬೆಂಡೋಲೆ ಖರೀದಿಸುತ್ತಾರೆ ಎನ್ನುವುದಾಗಿತ್ತು. ಇದು ನಿಜವೇ ಆಗಿದ್ದರೂ ಏನು ತಪ್ಪು? ತಾನು ದುಡಿದು ಸಂಪಾದಿಸಿದ ಹಣವನ್ನು ಮನೆಯಲ್ಲಿ ಎಲ್ಲಿ ಬಚ್ಚಿಟ್ಟರೂ ಕದ್ದು ಒಯ್ಯುವ ಗಂಡ, ಅಣ್ಣ, ತಮ್ಮಂದಿರುವ ಮಾತ್ರವಲ್ಲ, ಮಗಂದಿರೂ ಇರುವ ಮಹಿಳೆ ತನಗಾಗಿ ಒಂದು ಬೆಂಡೋಲೆ ಮಾಡಿಸಿಕೊಂಡು ಹಾಕಿಕೊಂಡಾಗ ಪುರುಷ ಪ್ರಪಂಚದಲ್ಲಿ ಆದ ಸಂಚಲನ ಮಹಿಳೆಯರ ಆರ್ಥಿಕ ಸ್ವಾತಂತ್ರವನ್ನು ಇಷ್ಟಪಡುವುದಿಲ್ಲ ಎನ್ನುವುದನ್ನು ಅರ್ಥೈಸಿ ಕೊಟ್ಟಿತು.

ಬೆಂಡೋಲೆ ಹಾಕಿಕೊಂಡ ಮಹಿಳೆ ತಾನು ದುಡಿದುದನ್ನು ಇದೀಗ ನೇರವಾಗಿ ಹೋಗಿ ಬ್ಯಾಂಕಿಗೆ ಸಾಲದ ಕಂತು ಕಟ್ಟುತ್ತಿದ್ದಳು. ಹಾಗೆಯೇ ಉಳಿತಾಯ ಖಾತೆಗಳ ವ್ಯವಹಾರವನ್ನೂ ಕಲಿತಳು. ಮಹಿಳೆ ಯಾರೇ ಆಗಲಿ ಆಕೆ ದುಡಿಯುವುದು ತನ್ನ ಕುಟುಂಬಕ್ಕಾಗಿ ಅಂದರೆ ಅದರಲ್ಲಿ ಅತ್ತೆ, ಮಾವ, ಗಂಡ, ಮಕ್ಕಳು ಸೇರಿರುತ್ತಾರೆ ಇಲ್ಲವೇ ತಂದೆ, ತಾಯಿ, ಅಣ್ಣ, ತಮ್ಮಂದಿರು ಸೇರಿರುತ್ತಾರೆ ಎನ್ನುವುದು ವಾಸ್ತವವಲ್ಲವೇ? ಅದೂ ಇಂತಹ ಕೆಳವರ್ಗದ ಮಹಿಳೆಯರು ತಮ್ಮ ಕುಟುಂಬದ ಸುಖ ಸಂತೋಷಗಳಲ್ಲಿಯೇ ತಮ್ಮ ಬದುಕಿನ ತೃಪ್ತಿ ಕಂಡುಕೊಳ್ಳುವವರು ಎನ್ನುವುದು ನಾನು ಕೃಷ್ಣಾಪುರದಲ್ಲಿ ಕಂಡ ವಾಸ್ತವ. ಈ ಆರ್ಥಿಕ ಸ್ವಾತಂತ್ರದಿಂದ ಅವರ ಕಿವಿಗಳು ಚಿನ್ನದ ಬೆಂಡೋಲೆಯಿಂದ ಶೋಭೆಗೊಂಡದ್ದು ನಿಜ. ಈ ಚರ್ಚೆಯ ಸಂದರ್ಭದಲ್ಲಿ ನನಗೆ ನೆನಪಾದುದು ಸಂಸ್ಕೃತದ ಒಂದು ಶ್ಲೋಕ. ಅದರ ಅರ್ಥ ಹೀಗಿದೆ.

ಕವಿ ಹೇಳುತ್ತಾನೆ ‘‘ಆ ರಾಜನ ಆಡಳಿತ ಅಂದರೆ ಸಾಮ್ರಾಜ್ಯದಲ್ಲಿ ಚಿನ್ನ ಅಳುತ್ತಿತ್ತಂತೆ. ತಾನು ಇದುವರೆಗೆ ರಾಜನ ಅಂತಃಪುರ, ರಾಜ ಪರಿವಾರದ ಹೆಣ್ಣು ಮಕ್ಕಳ ಕಿವಿ, ಕೊರಳಲ್ಲಿ ಮೆರೆಯುತ್ತಿದ್ದೆ. ಇದೀಗ ಈ ದೇಶದ ಬಡ ಹೆಣ್ಣು ಮಕ್ಕಳ ಕಿವಿ ಕೊರಳನ್ನು ಸೇರುವ ದಯನೀಯ ಸ್ಥಿತಿ ತನಗೆ ಬಂತಲ್ಲಾ?’’ ಎಂದು. ಬಹುಶಃ ಜನಾರ್ದನ ಪೂಜಾರಿಯವರ ಸಾಲ ಮೇಳದ ಸಂದರ್ಭದಲ್ಲೂ ಚಿನ್ನ ಹೀಗೆ ಅತ್ತಿರಬಹುದಲ್ಲವೇ? ಅಳಲಿ! ಚಿನ್ನದ ಸೊಕ್ಕು ಮುರಿಯುವಂತಹ ಕಾಂಚಾಣದ ಕಾಠಿಣ್ಯ ಕರಗುವಂತಹ ಇಂತಹ ಯೋಜನೆಗಳು ಸಾಕಷ್ಟು ಬರಲಿ ಎಂದು ಹಾರೈಸುತ್ತೇನೆ. ನನ್ನ ಮನೆಯ ಆಸುಪಾಸಿನ ಅನೇಕ ಮಹಿಳೆಯರ ಕಿವಿಯಲ್ಲಿದ್ದ ಗಿಲೀಟಿನ ಬೆಂಡೋಲೆಗಳ ಬದಲು ಚಿನ್ನದ ಬೆಂಡೋಲೆಗಳು ಹೊಳೆಯುತ್ತಿದ್ದುದನ್ನು ನಾನು ನೋಡಿದ್ದೇನೆ.

ರುಕ್ಕಯ್ಯಣ್ಣನ ಮಡದಿ ಕಮಲಕ್ಕ ಗಟ್ಟಿಗಿತ್ತಿ. ಇನ್ನೊಬ್ಬರ ನೆರವಿಗೆ ತಾನಾಗಿಯೇ ಓಡಿ ಹೋಗಿ ಅವರ ಅಗತ್ಯವನ್ನು ಪೂರೈಸುವವರು. ಅವರ ಈ ಗುಣ ಕೆಲವರಿಗೆ ಒಗ್ಗುತ್ತಿರಲಿಲ್ಲ. ಆದರೆ ನಮ್ಮಲ್ಲಿ ಅವರು ಬೆಳೆಸಿಕೊಂಡ ಆತ್ಮೀಯತೆಯಿಂದ ನನಗೆ ಅವರು ಉರ್ವಾಸ್ಟೋರ್‌ನಲ್ಲಿದ್ದ ನನ್ನ ತಾಯಿ ಮನೆಯ ಧಣಿಗಳ ಮನೆಯಿಂದ ತೆಂಗಿನ ಕಾಯಿಗಳನ್ನು ಗೋಣಿಯಲ್ಲಿ ತುಂಬಿ ಬಸ್ಸಿನಲ್ಲಿ ಹಾಕಿಕೊಂಡು ತಂದು ಕೊಡುತ್ತಿದ್ದರು. ಉರ್ವಾಸ್ಟೋರ್‌ನಲ್ಲಿದ್ದ ಸರಕಾರಿ ನೌಕರರ ರೇಷನ್ ಅಂಗಡಿಯಿಂದಲೇ ನಾವು ರೇಷನನ್ನು ಕೃಷ್ಣಾಪುರದ ವಿಳಾಸಕ್ಕೆ ಒಯ್ಯುತ್ತಿದ್ದೆವು. ಅವುಗಳನ್ನು ಕೂಡಾ ಅವರೇ ತಂದು ಕೊಡುತ್ತಿದ್ದರು. ಕಮಲಕ್ಕನ ಬಗ್ಗೆ ನಾನು ಹೇಳಬೇಕಾದ ಇನ್ನೊಂದು ವಿಷಯ ಹೀಗಿದೆ.

1986ರಲ್ಲಿ ಮಂಗಳೂರು ಕನ್ನಡ ಸಂಘದ ಬೆಳ್ಳಿಹಬ್ಬದ ನಿಮಿತ್ತ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸುವ ಜವಾಬ್ದಾರಿಯನ್ನು ಕಾರ್ಯದರ್ಶಿಯ ನೆಲೆಯಲ್ಲಿ ನಿರ್ವಹಿಸಿದ್ದೆ. ಇದರಿಂದ ದಣಿದ ನನಗೆ ವಿಪರೀತ ಜ್ವರ ಬಂತು. ಆ ವೇಳೆಯಲ್ಲಿ ನಾನು ಹೋಮಿಯೋಪಥಿ ಔಷಧಿಯ ಬಳಕೆ ಮಾಡುತ್ತಿದ್ದೆ. ಸೆಂಟ್ರಲ್ ಮಾರ್ಕೆಟ್‌ನ ಒಂದು ಕೊಠಡಿಯಲ್ಲಿ ಡಾ.ಶೇಕ್ ರಜಬ್ ಎನ್ನುವವರು ಸರಕಾರಿ ಹೋಮಿಯೋಪಥಿ ವೈದ್ಯರಾಗಿದ್ದರು. ನಾನು ಎದ್ದು ಓಡಾಡಲಾಗದ ಸ್ಥಿತಿಯಲ್ಲಿ ನಮ್ಮವರು ಡಾಕ್ಟರಲ್ಲಿ ವಿಷಯ ತಿಳಿಸಿ ಔಷಧಿ ತಂದರು. ಆದರೂ ಜ್ವರ ಬಿಡದೆ ಇದ್ದಾಗ ಡಾಕ್ಟರರು ತಾವೇ ಸ್ವತಃ ಮನೆ ವಿಳಾಸ ಪಡಕೊಂಡು ಮನೆಗೆ ಬಂದು ಪರೀಕ್ಷಿಸಿ ಔಷಧಿ ಕೊಟ್ಟ ಬಳಿಕ ನಾನು ಗುಣವಾದೆ. ಸುಮಾರು ಹೈದಿನೈದು ದಿನಗಳವರೆಗೆ ಮಲಗಿದ್ದಲ್ಲಿಯೇ ಇದ್ದ ನನ್ನನ್ನು ಡಾಕ್ಟರರು ಎರಡು ಮೂರು ಬಾರಿ ಬಂದು ಪರೀಕ್ಷಿಸಿದುದು, ವಯಸ್ಸಿನಲ್ಲಿ ಹಿರಿಯರಾದ ಅವರ ಕಾಳಜಿಯನ್ನು ತೋರಿಸುತ್ತಿತ್ತು.

ಅವರು ಸರಕಾರಿ ವೃತ್ತಿಯನ್ನು ಬಿಟ್ಟು ಸ್ವಂತ ದವಾಖಾನೆಯನ್ನು ಮುಳಿಹಿತ್ಲಿನಲ್ಲಿ, ತನ್ನ ಮನೆ ಪಕ್ಕದಲ್ಲೇ ಮಾಡಿಕೊಂಡಾಗಲೂ ನಾನು ನನ್ನ ಕುಟುಂಬಕ್ಕೆ ಅವರಿಂದಲೇ ಔಷಧಿ ತರುತ್ತಿದ್ದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಕೆಲಸಕ್ಕೆಂದು ಯಾರೂ ಇರಲಿಲ್ಲ. ಸೋದರ ಸೊಸೆ ಮದುವೆಯಾಗಿ ಹೋಗಿದ್ದಳು. ನನ್ನ ಅಮ್ಮ ನಮ್ಮಲ್ಲಿ ಬಂದು ಇದ್ದರೂ ಅವರಿಗೆ ಎಲ್ಲಾ ಕೆಲಸ ನನ್ನ ಆರೈಕೆ, ಅಡುಗೆ, ಇತರ ಮನೆ ಕೆಲಸ, ನಳ್ಳಿಯಿಂದ ನೀರು ತರುವ ಕೆಲಸ ಇವೆಲ್ಲವನ್ನು ನಿರ್ವಹಿಸಲು ಅಸಾಧ್ಯವಾಗಿತ್ತು. ಆಗ ತಾನಾಗಿಯೇ ಸಹಕರಿಸಿದ ಕಮಲಕ್ಕ ಪರೋಪಕಾರಿಯೇ. ಇದೆಲ್ಲಾ ಆಗಿ ಕೆಲವು ದಿನಗಳ ಬಳಿಕ ಮನೆಗೆ ಕಮಲಕ್ಕ ಹೀಗೆ ಪೀಠಿಕೆ ಹಾಕಿದರು, ‘‘ಟೀಚರೇ, ನನಗೆ ಬಯ್ಯಬೇಡಿ. ನನಗೆ ನೀವೊಂದು 5 ರೂಪಾಯಿ ಕೊಡಬೇಕು’’. ನನಗೆ ಯಾಕೆ ಎಂದು ಕೇಳಲು ಮನಸ್ಸಾಗಲಿಲ್ಲ. ನಾನು ಮಲಗಿಕೊಂಡಿದ್ದಾಗ ಬಂದು ಕೈ ಕಾಲು ಒತ್ತು ಹೋಗುತ್ತಿದ್ದರು. ಮಗನನ್ನು ಕರೆದೊಯ್ದು ಆಡಿಸುತ್ತಿದ್ದರು. ಅವರೇ ಮಾತು ಮುಂದುವರಿಸಿ 5 ರೂಪಾಯಿ ನನಗಲ್ಲ. ಕೊರಗಜ್ಜನಿಗೆ ಕಳ್ಳು ಇಡಬೇಕು. ಅದಕ್ಕೆ ನೀವು ಹುಷಾರಾಗಲು ಕೊರಗಜ್ಜನಿಗೆ ಹರಕೆ ಹೇಳಿದ್ದೆ. ಅದನ್ನು ನೀವೇ ಕೊಟ್ಟರೆ ಒಳ್ಳೆಯದು ಎಂದಾಗ ನನ್ನ ತರ್ಕಬುದ್ಧಿ ಮೂಕವಾಯಿತು.

ಅವರ ಭಾವನೆಯನ್ನು ಗೌರವಿಸಿ 5 ರೂಪಾಯಿ ಕೊಟ್ಟೆ. ಡಾಕ್ಷರರ ಔಷಧಿಯಿಂದ ಗುಣವಾಯ್ತೆಂದು ನಂಬುವ ನಾನು ಅವರ ನಂಬಿಕೆಗೆ ಕೇವಲ 5 ರೂಪಾಯಿಯ ಬೆಲೆ ಕಟ್ಟದೆ, ಅವರು ನನ್ನ ಬಗ್ಗೆ ತೋರಿದ ಆತ್ಮೀಯತೆಯು ಬೆಲೆ ಕಟ್ಟಲಾಗದ್ದು ಎಂದು ಭಾವಿಸಿದೆ. ಆ ವಿಶ್ವಾಸ, ಮನುಷ್ಯತ್ವವನ್ನೇ ಕವಿಯೊಬ್ಬರು ‘‘ನಂಬಿಗ್ಯಾಲೆ ತುಂಬ್ಯಾದೆ ನಮ್ಮ ಬಾಳು’’ ಎಂದಿರುವುದು. ಆದರೆ ನನಗೆ ಇಂತಹ ಹರಕೆಗಳಲ್ಲಿ ನಂಬಿಕೆ ಇಲ್ಲ. ಇನ್ನು ಮುಂದೆ ಇಂತಹ ಸಂದರ್ಭ ಬಾರದಿರಲಿ ಎಂದು ನಯವಾಗಿಯೇ ಹೇಳಿದೆ. ನಾನು ನನ್ನ ಬದುಕಿನಲ್ಲಿ ಯಾವ ಸಂದರ್ಭದಲ್ಲೂ ಯಾವ ದೇವರಿಗೂ ಹರಕೆ ಹೇಳಿಕೊಂಡಿಲ್ಲ. ಆದರೆ ದೇವರೆನ್ನುವ ಮನುಷ್ಯಾತೀತ ಶಕ್ತಿಯ ಅರಿವನ್ನು ಅಂತಃ ಸಾಕ್ಷಿಯೆಂದು ತಿಳಿದಿದ್ದೇನೆ.

share
ಚಂದ್ರಕಲಾ ನಂದಾವರ
ಚಂದ್ರಕಲಾ ನಂದಾವರ
Next Story
X