ಗೌರಿ ಲಂಕೇಶ್ ಹತ್ಯೆ : ಮುಸ್ಲಿಂ ಮುತ್ತಾಹಿದ ಮಹಜ್‍ನಿಂದ ಪ್ರತಿಭಟನೆ

ಶಿವಮೊಗ್ಗ, ಸೆ. 13: ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹಂತಕರ ಪತ್ತೆ ಹಚ್ಚಿ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಬುಧವಾರ ನಗರದಲ್ಲಿ ಮುಸ್ಲಿಂ ಮುತ್ತಾಹಿದ ಮಹಜ್ ಸಂಘಟನೆಯು ಪ್ರತಿಭಟನಾ ರ್ಯಾಲಿ ನಡೆಸಿತು. ಡಿ.ಸಿ. ಕಚೇರಿ ಮುಂಭಾಗ ಧರಣಿ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿತು.
ಗೌರಿ ಲಂಕೇಶ್‍ರವರು ದೇಶದಲ್ಲಿ ನಡೆಯುವ ವಿದ್ಯಮಾನಗಳನ್ನು ನಿಷ್ಪಕ್ಷಪಾತವಾಗಿ ವಿಶ್ಲೇಶಿಸುತ್ತ, ಬಲಪಂಥೀಯ ವಿಚಾರವಾದವನ್ನು ನಿರ್ಭಿಡೆಯಿಂದ ಖಂಡಿಸುತ್ತಿದ್ದರು. ದೀನದಲಿತರ ಮತ್ತು ಅಲ್ಪಸಂಖ್ಯಾತರ ಧ್ವನಿಯಾಗಿದ್ದರು. ಆದರೆ ಇಂತಹ ಪ್ರಗತಿಪರ ವಿಚಾರಧಾರೆಯ ಗೌರಿ ಲಂಕೇಶ್‍ರವರನ್ನು ಗುಂಡಿಕ್ಕಿ ಹತ್ಯೆ ನಡೆಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಗೌರಿ ಲಂಕೇಶ್‍ರವರ ಹತ್ಯೆಯ ಹಿಂದೆ ವಿಕಾರ ಮನಸ್ಥಿತಿಯವರ ಕೈವಾಡವಿದ್ದು, ವ್ಯವಸ್ಥಿತ ಹುನ್ನಾರವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆಗೆ ಮುಂದಾಗಬೇಕು. ಕೊಲೆಗಡುಕರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಗೌರಿ ಲಂಕೇಶ್‍ರವರು ಹತ್ಯೆ ನಡೆದು ಒಂದು ವಾರವಾಗುತ್ತಾ ಬಂದರೂ ಇಲ್ಲಿಯವರೆಗೂ ಹಂತಕರ ಸುಳಿವು ಪತ್ತೆಯಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ನಡೆದ ಎಂ.ಎಂ.ಕಲಬುರ್ಗಿ, ಪನ್ಸಾರೆ, ದಾಬೋಲ್ಕರ್ ಕೊಲೆ ಪ್ರಕರಣಗಳ ಆರೋಪಿಗಳ ಮಾಹಿತಿ ಲಭ್ಯವಾಗಿಲ್ಲದಿರುವುದು ನಿಜಕ್ಕೂ ದುರ್ದೈವದ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಪರ್ವೇಜ್ ಅಹ್ಮದ್, ಅಹ್ಮದ್ ಉಮ್ರೀದ್, ಇಕ್ಬಾಲ್ ಅಹ್ಮದ್, ಅಬ್ದುಲ್ ವಹಾಬ್ ಡಿಎಸ್‍ಎಸ್ ಮುಖಂಡ ಎಂ. ಗುರುಮೂರ್ತಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.







