ಪಟಾಕಿ ನಿಷೇಧ ಹಿಂದೆಗೆದ ಸುಪ್ರೀಂ ಕೋರ್ಟ್

ಅಮೃತಸರ, ಸೆ.13: ದೀಪಾವಳಿಗೆ ಒಂದು ತಿಂಗಳು ಇರುವಾಗಲೇ ಸುಪ್ರೀಂ ಕೋರ್ಟ್ ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿಯ ವಲಯದಲ್ಲಿ ಪಟಾಕಿಗಳ ಮೇಲೆ ವಿಧಿಸಿದ ನಿಷೇಧವನ್ನು ಮಂಗಳವಾರ ಹಿಂದೆ ತೆಗೆದುಕೊಂಡಿದೆ.
ಮಾನವನ ಆರೋಗ್ಯದ ಮೇಲೆ ಪಟಾಕಿಗಳಿಂದ ಉಂಟಾಗುವ ದುಷ್ಪರಿಣಾಮಗಳನ್ನು ಅಧ್ಯಯನ ಮಾಡಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ನೇತೃತ್ವದಲ್ಲಿ ಸಮಿತಿಯನ್ನು ಸುಪ್ರೀಂ ಕೋರ್ಟ್‌ನ ಪೀಠ ರೂಪಿಸಿತ್ತು. ಈ ಬಗ್ಗೆ ಡಿಸೆಂಬರ್ 31ರಂದು ವರದಿ ಸಲ್ಲಿಸುವಂತೆ ಕೂಡ ನಿರ್ದೇಶಿಸಿತ್ತು. ಈಗ ಪೀಠ ಈ ಮಧ್ಯಂತರ ವ್ಯವಸ್ಥೆ ಮಾಡಿದೆ.
ದಿಲ್ಲಿ ಹಾಗೂ ರಾಷ್ಟ್ರ ರಾಜಧಾನಿಯ ವಲಯದಲ್ಲಿ ಪಟಾಕಿ ಮಾರಾಟಕ್ಕೆ ಖಾಯಂ ಪರವಾನಿಗೆ ನೀಡುವುದನ್ನು ರದ್ದುಗೊಳಿಸಿ 2016 ನವೆಂಬರ್ 11ರಂದು ನ್ಯಾಯಾಲಯ ಮಧ್ಯಂತರ ಆದೇಶ ನೀಡಿತ್ತು.
ಈ ನಿಷೇಧ ರದ್ದುಗೊಳಿಸಿರುವ ಮದನ್ ಬಿ. ಲೋಕುರ್ ಹಾಗೂ ದೀಪಕ್ ಗುಪ್ತಾ ಅವರನ್ನೊಳಗೊಂಡ ಪೀಠ, ಯಾವುದೇ ಅಧ್ಯಯನ ನಡೆಸದೆ ಹಬ್ಬಗಳ ಸಂದರ್ಭ ಪಟಾಕಿಗೆ ಸಂಪೂರ್ಣ ನಿಷೇಧ ಹೇರುವುದು ವಿವೇಕ ರಹಿತ ಹೆಜ್ಜೆಯಾದೀತು ಎಂದಿದೆ.
ಈ ವರ್ಷ 500 ತಾತ್ಕಾಲಿಕ ಪರವಾನಿಗೆಗೆ ಮಾತ್ರ ಅವಕಾಶ ನೀಡುವಂತೆ ಪೀಠ ದಿಲ್ಲಿ ಪೊಲೀಸರಿಗೆ ನಿರ್ದೇಶಿಸಿದೆ. 2016ರಲ್ಲಿ ದಿಲ್ಲಿಯಲ್ಲಿ 968 ಪರವಾನಿಗೆಯನ್ನು 24 ಗಂಟೆಗಳಿಗೆ ನೀಡಲಾಗಿತ್ತು.







