ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು, ಬಾಲಕಿಯರ ವಸತಿ ನಿಲಯ ಸ್ಥಾಪನೆಗೆ ಅನುಮೋದನೆ
ಬೆಂಗಳೂರು, ಸೆ. 13: ಬೆಂಗಳೂರು ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಆವರಣದಲ್ಲಿ ಹೊಸ ವೈದ್ಯಕೀಯ ಕಾಲೇಜು ಹಾಗೂ ಹಾಜಿ ಸರ್ ಇಸ್ಮಾಯಿಲ್ ಸೇಠ್ (ಘೋಷಾ) ಆಸ್ಪತ್ರೆಯ ಆವರಣದಲ್ಲಿ 197.54ಕೋಟಿ ರೂ.ವೆಚ್ಚದಲ್ಲಿ ಬಾಲಕಿಯರ ವಸತಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಸಚಿವ ಜಯಚಂದ್ರ, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಕಸಬಾ ಹೋಬಳಿಯ ಹಿರೇಶಕುನ ಗ್ರಾಮದ 4.38ಎಕರೆ ಗೋಮಾಳ ಜಮೀನನ್ನು ಸೊರಬ ತಾಲೂಕು ಆರ್ಯ ಈಡಿಗರ(ದೀವರ) ಸಂಘಕ್ಕೆ ಶಿಕ್ಷಣ ಸಂಸ್ಥೆ, ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನ ಸ್ಥಾಪಿಸಲು ಮಾರ್ಗಸೂಚಿ ದರದ ಶೇ.10ರಷ್ಟು ಮೊತ್ತಕ್ಕೆ ಮಂಜೂರು ಒಪ್ಪಿಗೆ ನೀಡಿದೆ ಎಂದರು.
ಬ್ಯಾರೇಜ್ ನಿರ್ಮಾಣ: ಕಾರವಾರ ಮತ್ತು ಅಂಕೋಲ ಪಟ್ಟಣಗಳು ಹಾಗೂ ಮಾರ್ಗ ಮಧ್ಯದ ಹಳ್ಳಿಗಳು ಮತ್ತು ಸೀಬರ್ಡ್ ಯೋಜನೆಗಳಿಗೆ ನೀರು ಸರಬರಾಜು ಮಾಡಲು ಗಂಗಾವಳಿ ನದಿಗೆ ಅಡ್ಡಲಾಗಿ 158.62 ಕೋಟಿ ರೂ ಅಂದಾಜು ವೆಚ್ಚದಲ್ಲಿ ವೆಂಟೆಡ್ ಬ್ಯಾರೇಜ್ ನಿರ್ಮಾಣ ಮಾಡಲು ಸಂಪುಟ ಅನುಮೋದನೆ ನೀಡಿದೆ ಎಂದರು.
ಸಮಿತಿ ರಚನೆ: ಸ್ಮಾರ್ಟ್‌ಸಿಟಿ ಯೋಜನೆ ರೂಪಿಸಲು ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ, ಸ್ಮಾರ್ಟ್‌ಸಿಟಿ ಅಭಿಯಾನದಡಿಯಲ್ಲಿ ಸೃಜಿಸಲಾಗಿರುವ ವಿಶೇಷ ಉದ್ದೇಶಿತ ವಾಹನ (ಸ್ಪೆಷಲ್ ಪರ್ಪಸ್ ವೆಹಿಕಲ್)ಗಳಿಗೆ ಅಧಿಕಾರ ಪ್ರತ್ಯಾಯೋಜಿಸಲು ಅನುಷ್ಠಾನ ಹಾಗೂ ಪರಿಶೀಲನೆಗೆ ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನದ ಸ್ಮಾರ್ಟ್‌ಸಿಟಿ ಯೋಜನೆ ರೂಪುರೇಷೆಗಳನ್ನು ಸಿದ್ದಪಡಿಸುವಲ್ಲಿ ರಾಜ್ಯ ಸರಕಾರಕ್ಕೆ ಹಾಗೂ ಜನಪ್ರತಿನಿಧಿಗಳ ಪಾತ್ರವಿರಲಿಲ್ಲ. ಇದೀಗ ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಈ ಸಮಿತಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗೆ ಆಯ್ಕೆಯಾಗಿರುವ ರಾಜ್ಯದ ಆರು ನಗರಗಳ ಸಂಬಂಧಿತ ಜಿಲ್ಲಾ ಉಸ್ತವಾರಿ ಸಚಿವರೂ, ಸಂಸದರು, ಶಾಸಕರು, ಸ್ಥಳೀಯ ಸಂಸ್ಥೆಗಳ ಮೇಯರ್, ವಿಪಕ್ಷ ನಾಯಕರು ಹಾಗೂ ಆಯುಕ್ತರು ಇರುತ್ತಾರೆಂದು ಹೇಳಿದರು.
ವರದಿ ಸಿದ್ದಪಡಿಸಲು 275 ಕೋಟಿ ರೂ.
‘ರಾಜ್ಯದ 25 ಜಿಲ್ಲಾ ಕೆಂದ್ರಗಳಲ್ಲಿ ವರ್ತುಲ ರಸ್ತೆಗಳನ್ನು ಅಭಿವೃದ್ಧಿ ಹಾಗೂ ಯೋಜನೆ ಅನುಷ್ಠಾನಗೊಳಿಸಲು ಅನುವಾಗುವಂತೆ ಅಧ್ಯಯನಾ ವರದಿ ಸಿದ್ಧಪಡಿಸಿ ಸಲ್ಲಿಸಲು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣಾ ಸಮಿತಿ ರಚಿಸಲು ಸಂಪುಟ ಒಪ್ಪಿಗೆ ನೀಡಿದೆ.
25 ಪ್ರಮುಖ ನಗರಗಳ ಸಮಗ್ರ ಸಮೀಕ್ಷೆ, ಅಗತ್ಯ ಕುರಿತು ಮೇಲ್ವಿಚಾರಣೆ, ಕ್ರೋಢೀಕೃತ ವರದಿ ಸಲ್ಲಿಸಲಿದೆ. ಪ್ರಮುಖ ನಗರಗಳನ್ನು ಸಮೀಕ್ಷೆ ನಡೆಸಿ-ಮಾಹಿತಿ ಕ್ರೋಢೀಕರಣಕ್ಕೆ 56ಕೋಟಿ ರೂ., ನಗರ ಯೋಜನಾ ಕಾರ್ಯಕ್ರಮಗಳ ತಯಾರಿಕಾ ವೆಚ್ಚ 169 ಕೋಟಿ ರೂ.ಹಾಗೂ ಯೋಜನೆ ಮೇಲ್ವಿಚಾರಣಾ ಮತ್ತು ಆಡಳಿತಾತ್ಮಕ ವೆಚ್ಚ 50 ಕೋಟಿ ರೂ. ಸೇರಿ 275 ಕೋಟಿ ರೂ.ಮಂಜೂರಿಗೆ ಸಂಪುಟ ಸಮ್ಮತಿಸಿದೆ’
-ಟಿ.ಬಿ.ಜಯಚಂದ್ರ ಕಾನೂನು ಸಚಿವ







