ದೇವಸ್ಥಾನಕ್ಕೆ ನುಗ್ಗಿದ ತಂಡ: ಕಳ್ಳತನಕ್ಕೆ ಯತ್ನ

ವಿಟ್ಲ, ಸೆ. 13: ಬಂಟ್ವಾಳ ತಾಲೂಕಿನ ಅರಳ ಮತ್ತು ಕೊಯಿಲ ಎರಡು ಗ್ರಾಮಗಳ ಗ್ರಾಮ ದೇವತೆ ಶ್ರೀ ಗರುಡಮಹಾಕಾಳಿ ದೇವಸ್ಥಾನಕ್ಕೆ ನುಗ್ಗಿದ ತಂಡ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ದೇವಸ್ಥಾನದ ಅರ್ಚಕ ಹರೀಶ ಭಟ್ ಅವರು ಎಂದಿನಂತೆ ಮಂಗಳವಾರ ರಾತ್ರಿ ಸುಮಾರು ಏಳೂವರೆ ಗಂಟೆಗೆ ಪೂಜೆ ಮುಗಿಸಿ ಮನೆಗೆ ತೆರಳಿದ್ದು, ಬುಧವಾರ ಬೆಳಗ್ಗೆ 10 ಗಂಟೆಗೆ ಪೂಜೆಗೆಂದು ಆಗಮಿಸಿದಾಗ ದೇವಳದ ಎದುರು ಬಾಗಿಲಿನ ಚಿಲಕ ಮುರಿದಿರುವುದು ಕಂಡು ಬಂದಿದೆ. ತಕ್ಷಣ ಅವರು ದೇವಳದ ಆಡಳಿತ ಮೊಕ್ತೇಸರ ಎ ರಾಜೇಂದ್ರ ಶೆಟ್ಟಿ ಮತ್ತು ಸಮಿತಿ ಸದಸ್ಯ ಜಗದೀಶ ಆಳ್ವ ಅಗ್ಗೊಂಡೆ ಅವರ ಮೂಲಕ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದೇವಳದ ಸುತ್ತು ಪೌಳಿ ಎದುರು ಬಾಗಿಲಿನ ಚಿಲಕ ಮುರಿದು ಒಳಪ್ರವೇಶಿಸಿದ ಕಳ್ಳರು ಬಳಿಕ ತೀರ್ಥ ಮಂಟಪದಲ್ಲಿದ್ದ ಸ್ಟೀಲ್ ಕಾಣಿಕೆ ಡಬ್ಬಿಯನ್ನು ತೆರೆಯಲು ವಿಫಲ ಯತ್ನ ನಡೆಸಿರುವುದು ಕಂಡು ಬಂದಿದೆ. ಇದೇ ವೇಳೆ ಗರ್ಭಗುಡಿ ಬಾಗಿಲಿನ ಚಿಲಕ ಮುರಿದು ಒಳಪ್ರವೇಶಿಸಿ ಅಲ್ಲಿಯೂ ಚಿನ್ನಾಭರಣಕ್ಕಾಗಿ ತಡಕಾಡಿದ್ದಾರೆ ಎಂದು ತಿಳಿದುಬಂದಿದೆ.
ಇಲ್ಲಿನ ಮಹಾಗಣಪತಿ ದೇವರ ಗುಡಿ ಎದುರಿನಲ್ಲಿದ್ದ ಸ್ಟೀಲ್ ಕಾಣಿಕೆ ಡಬ್ಬಿಯೊಂದು ದೇವಳದ ಹೊರಗೆ ರಸ್ತೆ ಬದಿ ಬಿದ್ದಿರುವುದು ದೊರೆತಿದೆ. ಭಾರೀ ಕಾರಣಿಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಈ ದೇವಸ್ಥಾನವು ಕಳೆದ ಆರು ತಿಂಗಳ ಹಿಂದೆಯಷ್ಟೇ ಪುನರ್ ನವೀಕರಣಗೊಂಡು ಬ್ರಹ್ಮಕಲಶೋತ್ಸವ ನಡೆದಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







