ಅನಾರೋಗ್ಯ ಪೀಡಿತ ಮಕ್ಕಳ ಸಹಾಯಕ್ಕೆ ಶ್ರೀ ಕೃಷ್ಣಜನ್ಮಾಷ್ಟಮಿ ವೇಷ

ಉಡುಪಿ, ಸೆ.13: ಕಳೆದ ಮೂರು ವರ್ಷಗಳಿಂದ ಉಡುಪಿಯ ಶ್ರೀಕೃಷ್ಣ ಜನ್ಮಾಷ್ಟಮಿಯಂದು ವೇಷಧರಿಸಿ ಸಂಗ್ರಹಿಸಿದ ಹಣವನ್ನು ಅನಾರೋಗ್ಯ ಪೀಡಿತ ಬಡ ಮಕ್ಕಳ ಚಿಕಿತ್ಸೆಗೆ ನೀಡುತ್ತಿರುವ ರವಿ ಕಟಪಾಡಿ ಮತ್ತು ತಂಡ ಈ ಬಾರಿಯು ವಿಶಿಷ್ಟ ರೀತಿಯ ವೇಷ ಧರಿಸಿ ನಾಲ್ಕು ಮಕ್ಕಳ ಚಿಕಿತ್ಸೆಗೆ ಹಣ ಸಂಗ್ರಹಿಸುತ್ತಿದೆ.
ಹೀಗೆ ವಿಶಿಷ್ಟ ರೀತಿಯ ವೇಷಗಳನ್ನು ಧರಿಸಿ ಜನರಿಂದ ಮೊದಲ ವರ್ಷ 1,04,810ರೂ., ಎರಡನೆ ವರ್ಷ 3.20ಲಕ್ಷ ರೂ. ಹಾಗೂ ಮೂರನೆ ವರ್ಷ 4.65ಲಕ್ಷ ರೂ. ಹಣವನ್ನು ಸಂಗ್ರಹಿಸಿ ಒಟ್ಟು 9 ಮಕ್ಕಳ ಚಿಕಿತ್ಸೆಗೆ ನೆರವು ನೀಡಲಾಗಿದೆ.
ಈ ಬಾರಿಯ ಗ್ರಾಂಪಸ್ ಎಂಬ ವಿಶಿಷ್ಟ ವೇಷ ಹಾಕಿದ್ದು, ಇದಕ್ಕೆ 35ಸಾವಿರ ರೂ. ಖರ್ಚಾಗಿದೆ. ಇದಕ್ಕೆ ವಾರದ ಸಂಬಳದಲ್ಲಿ ಕೂಡಿಟ್ಟ ಹಣವನ್ನು ವಿನಿಯೋಗಿಸಿದ್ದು, ಸಾರ್ವಜನಿಕರಿಂದ ಸಂಗ್ರಹವಾದ ಯಾವುದೇ ಹಣ ಬಳಸಿಲ್ಲ ಎಂದು ಸೆಂಟ್ರಿಂಗ್ ಕೆಲಸ ಮಾಡುವ ರವಿ ಕಟಪಾಡಿ ತಿಳಿಸಿದ್ದಾರೆ.
ಸೆ.13 ಮತ್ತು 14ರಂದು ವೇಷಧರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮೂಡಬಿದ್ರೆ ದರೆಗುಡ್ಡೆ ಗ್ರಾಪಂ ವ್ಯಾಪ್ತಿಯ ಪಣಪಿಲ ಪುನಿಕೆಬೆಟ್ಟುವಿನಲ್ಲಿ ಚರ್ಮದ ಕಾಯಿಲೆಯಿಂದ ಬಳಲುತ್ತಿರುವ ಒಂದೂವರೆ ವರ್ಷದ ಲಾವಣ್ಯ, ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಶಿವಮೊಗ್ಗದ ಮೆಹಕ್, ದೆಂದೂರು ಕಟ್ಟೆಯ ಒಂದೂವರೆ ತಿಂಗಳ ಮಗು ಮತ್ತು ಬನ್ನಂಜೆಯ ಮಗುವಿನ ಚಿಕಿತ್ಸೆಗೆ ನೆರವು ನೀಡಲಾಗುವುದು ಎಂದರು.
ಸಂಗ್ರಹಿಸಿದ ಹಣವನ್ನು ಸೆ.19ರಂದು ಸಂಜೆ 4ಗಂಟೆಗೆ ಕಟಪಾಡಿ ವಿಜಯ ಬ್ಯಾಂಕಿನ ಬಳಿ ಕೇಮಾರು ಶ್ರೀಈಶವಿಠಲದಾಸ ಸ್ವಾಮೀಜಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸ್ಪಿ ಡಾ.ಸಂಜೀವ ಪಾಟೀಲ್ ಸಮ್ಮುಖದಲ್ಲಿ ಫಲಾನುಭವಿಗಳಿಗೆ ನೀಡಲಾಗುವುದು ಎಂದೂ ಅವರು ಹೇಳಿದರು.







