ಗಮನ ಸೆಳೆಯುತ್ತಿರುವ ರಾಮಾಂಜಿಯ ‘ಮಾರಿಕಾಡು ವೇಷ’

ಉಡುಪಿ, ಸೆ.13: ಕಳೆದ ನಾಲ್ಕು ವರ್ಷಗಳಿಂದ ಕೃಷ್ಣಾಷ್ಟಮಿಯ ಸಂದರ್ಭ ನಾಗಸಾಧು, ಮಾಯಾನ್ ಸಂಸ್ಕೃತಿ, ತೈಯಂ ಹಾಗೂ ಅಪಕಲಿಪ್ಟೋ ವೇಷಗಳನ್ನು ಧರಿಸಿ ಜನರ ಗಮನ ಸೆಳೆದಿದ್ದ ನಮ್ಮ ಭೂಮಿಯ ರಾಮಾಂಜಿ ಈ ಬಾರಿಯ ಕೃಷ್ಣಾ ಷ್ಟಮಿಗೆ ‘ಮಾರಿಕಾಡು ವೇಷ’ ಧರಿಸಿದ್ದು, ಈ ಮೂಲಕ ಕೊರಂಗ್ರಪಾಡಿಯ ಕಲ್ವಾರಿ ವೃದ್ಧಾಶ್ರಮಕ್ಕೆ ನೀಡಲು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತಿದ್ದಾರೆ.
ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ನಾಟಕದಲ್ಲಿ ಬರುವ ಮಾಟಗಾತಿಯರನ್ನು ಡಾ.ಚಂದ್ರಶೇಖರ ಕಂಬಾರರು ಮಾರಿಕಾಡು ಎಂಬುದಾಗಿ ಕನ್ನಡದಲ್ಲಿ ರೂಪಾಂತರಿಸಿದ್ದು, ಪ್ರಕೃತಿ ಮತ್ತು ಮನುಷ್ಯನ ವಿರುದ್ಧವಾಗಿ ಈ ಮಾರಿಕಾಡು ಇರುವಂತೆ ಭಾಸವಾಗುತ್ತಿದೆ. ಬುಡಮೇಲಾದ ಕಾಡುಗಳು ಎಂಬ ಅರ್ಥ ಬಿಂಬಿಸುವ ಇದು ವಿನ್ಯಾಸದ ದೃಷ್ಠಿಯಿಂದ ಆಕರ್ಷಣೀಯವಾಗಿದೆ ಎಂದು ರಾಮಾಂಜಿ ನುಡಿದರು.
ಇದು ಪ್ರಶಾಂತ್ ಉದ್ಯಾವರ ಅವರ ಪರಿಕಲ್ಪನೆ ಮತ್ತು ವಿನ್ಯಾಸವಾಗಿದ್ದು, ಇವರಿಗೆ ಭುವನ್ ಮಣಿಪಾಲ ಸಹಕಾರ ನೀಡಿದ್ದಾರೆ. ಈ ವೇಷ ಹಾಕಲು ಸುಮಾರು 25 ಸಾವಿರ ರೂ. ವೆಚ್ಚವಾಗಿದೆ. ಎರಡು ದಿನಗಳಲ್ಲಿ ಸಾರ್ವಜನಿಕ ರಿಂದ ಸಂಗ್ರಹವಾದ ಹಣವನ್ನು ಕಲ್ವಾರಿ ವೃದ್ಧಾಶ್ರಮಕ್ಕೆ ನೀಡಲಾಗುವುದು ಎಂದವರು ತಿಳಿಸಿದರು.





