ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: ಸ್ವಾಮೀಜಿ ಆಪ್ತರ ವಿಚಾರಣೆ ಸಾಧ್ಯತೆ

ಬೆಂಗಳೂರು, ಸೆ.13: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಸಿಟ್ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಸ್ವಾಮೀಜಿ ಹಾಗೂ ಅವರ ಆಪ್ತರ ವಿಚಾರಣೆ ನಡೆಸಲು ಮುಂದಾಗಿರುವುದಾಗಿ ತಿಳಿದುಬಂದಿದೆ.
ಗೌರಿ ಲಂಕೇಶ್ ಹೆಸರಿನ ವಾರ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನಗಳ ಬಗ್ಗೆ ಹಲವು ಮಾಹಿತಿ ಸಂಗ್ರಹಿಸಿರುವ ಸಿಟ್‌ಅಧಿಕಾರಿಗಳು, ಗೌರಿ ಲಂಕೇಶ್ ಅವರು ಬರೆದಿದ್ದ ಲೇಖನಗಳ ಆಧಾರದಲ್ಲಿ ಸ್ವಾಮೀಜಿಗಳು, ಪತ್ರಕರ್ತರು ಸೇರಿ ಕೆಲವರನ್ನು ವಿಚಾರಣೆಗೊಳಪಡಿಸಲಿದ್ದಾರೆ ಎನ್ನಲಾಗಿದೆ.
ಬೆದರಿಕೆ?: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಸೇರಿ ಕೆಲವರ ವಿರುದ್ಧ ಪತ್ರಿಕೆಯಲ್ಲಿ ಬರೆದ ಸಂದರ್ಭದಲ್ಲಿ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಅವರಿಗೆ ಕೆಲವರಿಂದ ಬೆದರಿಕೆಗಳು ಬಂದಿದ್ದ ಮಾಹಿತಿ ಸಿಕ್ಕಿದೆ. ಅಂಥವರ ವಿಚಾರಣೆಗೆ ಪಟ್ಟಿ ಸಿದ್ಧಪಡಿಸಲಾಗಿದೆ. ಅದೇ ರೀತಿ, ಕೆಲ ಪತ್ರಕರ್ತರನ್ನು ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಮೂವರ ಕೈವಾಡ ಶಂಕೆ?: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮೂವರ ಕೈವಾಡವಿದ್ದು, ಇದರಲ್ಲಿ ಒಬ್ಬ ಗುಂಡು ಹಾರಿಸಿದರೆ, ಮತ್ತಿಬ್ಬರು ಆತನು ಸುರಕ್ಷಿತವಾಗಿ ಹೋಗಲು ಸಹಾಯ ಮಾಡಿರುವುದಾಗಿ ಸಿಟ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕದಲ್ಲಿ ನಡೆದಿರುವ ಹಲವು ಕೊಲೆ ಪ್ರಕರಣಗಳನ್ನು ಅಧಿಕಾರಿಗಳು ಪರಿಶೀಲಿಸಲಾಗಿದೆ. ವಿವಿಧ ರಾಜ್ಯಗಳ ಹಿರಿಯ ಪೊಲೀಸ್ ತನಿಖಾಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಗೌರಿ ಸಹೋದರ ಇಂದ್ರಜಿತ್ ವಿಚಾರಣೆ:
ಹನ್ನೆರಡು ವರ್ಷದ ಹಿಂದೆ ಗೌರಿ ಲಂಕೇಶ್ ಅವರಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ್ದ ಆರೋಪ ಪ್ರಕರಣ ಸಂಬಂಧ ಅವರ ಸಹೋದರ ಇಂದ್ರಜಿತ್ ಲಂಕೇಶ್‌ರನ್ನು ಸಿಟ್ ಅಧಿಕಾರಿಗಳು ವಿಚಾರಣೆ ನಡೆಸಿದರು.
ಬುಧವಾರ ಇಂದ್ರಜಿತ್‌ರನ್ನು ಭೇಟಿ ಮಾಡಿದ ಹಿರಿಯ ಸಿಟ್ ಅಧಿಕಾರಿಗಳು, ಎರಡು ಗಂಟೆಗೂ ಅಧಿಕ ಸಮಯ ಅವರನ್ನು ಪ್ರಶ್ನಿಸಿ, ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಇಂದ್ರಜಿತ್ ಅವರು, ಪ್ರಕರಣದ ಬಳಿಕ ಗೌರಿ ಹಾಗೂ ನನ್ನ ಸಂಬಂಧ ಚೆನ್ನಾಗಿತ್ತು ಎಂದಿರುವುದಾಗಿ ತಿಳಿದುಬಂದಿದೆ.
ಹತ್ಯೆಯ ತನಿಖೆ ಚುರುಕುಗೊಂಡಿದ್ದು. ನಿಮ್ಮ ಸಹಕಾರ ಅಗತ್ಯ ಎಂದು ಸಿಟ್ ಅಧಿಕಾರಿಗಳು ಹೇಳಿದ ಬಳಿಕ, ಅವರ ಹಲವು ಪ್ರಶ್ನೆಗಳಿಗೆ ಇಂದ್ರಜಿತ್ ಉತ್ತರಿಸಿದ್ದಾರೆ. ಅಲ್ಲದೆ, ಕೆಲ ದಿನಗಳ ಹಿಂದೆ ಸಹೋದರಿ ಕವಿತಾ ಲಂಕೇಶ್ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದರು.







