ರಾಜ್ಯ ಹೈಕೋರ್ಟ್ ಇತಿಹಾಸದಲ್ಲಿಯೇ ಇಬ್ಬರು ಮಹಿಳಾ ನ್ಯಾಯಮೂರ್ತಿಗಳ ಒಳಗೊಂಡ ವಿಭಾಗೀಯ ಪೀಠ ರಚನೆ

ಬೆಂಗಳೂರು, ಸೆ.13: ರಾಜ್ಯ ಹೈಕೋರ್ಟ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಇಬ್ಬರು ಮಹಿಳಾ ನ್ಯಾಯಮೂರ್ತಿಗಳನ್ನು ಒಳಗೊಂಡ ವಿಭಾಗೀಯ ಪೀಠವನ್ನು ರಚನೆ ಮಾಡಲಾಗಿದೆ. ಜೈಲುಗಳಲ್ಲಿರುವ ಅಪರಾಧಿಗಳು ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಗಳು ವಿಚಾರಣೆಗಾಗಿ ಈ ವಿಶೇಷ ವಿಭಾಗೀಯ ಪೀಠ ರಚಿಸಲಾಗಿದೆ.
ಕ್ರಿಮಿನಲ್ ಮೇಲ್ಮನವಿಗಳ ತ್ವರಿತ ಇತ್ಯರ್ಥಕ್ಕೆ ವಿಶೇಷ ಪೀಠ ರಚನೆ ಮಾಡುವಂತೆ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಇತ್ತೀಚೆಗೆ ನಿರ್ದೇಶನ ನೀಡಿದ್ದರು. ಅದರಂತೆ ನ್ಯಾಯಮೂರ್ತಿ ರತ್ನಕಲಾ ಮತ್ತು ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಅವರನ್ನು ಒಳಗೊಂಡ ವಿಶೇಷ ವಿಭಾಗೀಯ ಪೀಠ ರಚನೆ ಮಾಡಲಾಗಿದೆ. ಹೈಕೋರ್ಟ್ ಇತಿಹಾಸದಲ್ಲಿ ಇಬ್ಬರು ಮಹಿಳಾ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ರಚನೆಯಾದ ಮೊದಲ ವಿಭಾಗೀಯ ಪೀಠ ಇದಾಗಿದೆ ಎನ್ನಲಾಗಿದೆ.
ಈ ನ್ಯಾಯಪೀಠವು ಸೆ.16ರಂದು ಕೋರ್ಟ್ ಹಾಲ್ 14ರಲ್ಲಿ ಬೆಳಗ್ಗೆ 10.30ಗೆ ವಿಶೇಷ ಕಲಾಪ ನಡೆಸಲಿದೆ. ಈ ವಿಭಾಗೀಯ ಪೀಠದ ಮುಂದೆ ಒಟ್ಟು 30 ಕ್ರಿಮಿನಲ್ ಮೇಲ್ಮನವಿಗಳು ವಿಚಾರಣೆಗೆ ನಿಗದಿಯಾಗಿದೆ. ಈ ಎಲ್ಲ ಮೇಲ್ಮನವಿಗಳು 2012ನೆ ಸಾಲಿನಲ್ಲಿ ದಾಖಲಾಗಿದ್ದು, ಇವುಗಳಲ್ಲಿ ರಾಜ್ಯ ಸರಕಾರ ಕಾನೂನು ನೆರವು ನೀಡಲಾಗುತ್ತಿದೆ. ರಾಜ್ಯ ಹೈಕೋರ್ಟ್‌ಗೆ ಈವರೆಗೂ ಕೇವಲ 6 ಮಂದಿ ಮಹಿಳಾ ನ್ಯಾಯಮೂರ್ತಿಗಳು ನೇಮಕಗೊಂಡಿದ್ದಾರೆ. ಅವರಲ್ಲಿ ಮೊದಲಿಗರು ನ್ಯಾ.ಮಂಜುಳಾ ಚೆಲ್ಲೂರ್. 2000ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು, 2011ರಲ್ಲಿ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.
ಸದ್ಯ ಮುಂಬೈ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತದನಂತರ ಬಿ.ವಿ.ನಾಗರತ್ನ, ಬಿ.ಎಸ್.ಇಂದ್ರಕಲಾ, ರತ್ನಕಲಾ, ಎಸ್.ಸುಜಾತ ಮತ್ತು ಕೆ.ಎಸ್.ಮುದಗಲ್ ಅವರುಗಳು ಕ್ರಮವಾಗಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ನೇಮಕಗೊಂಡಿದ್ದವರು.
ನ್ಯಾಯಮೂರ್ತಿ ಬಿ.ಎಸ್.ಇಂದ್ರ ಕಲಾ ಅವರು 2014ರಲ್ಲಿ ಸೇವೆಯಿಂದ ನಿವೃತ್ತಿಯಾಗಿದ್ದರು. ಸದ್ಯ ಕರ್ನಾಟಕ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾಗಿದ್ದಾರೆ. ಇನ್ನೂ ವಿಶೇಷ ಎಂದರೆ ನ್ಯಾಯಮೂರ್ತಿ ಎಸ್.ಸುಜಾತ ಅವರನ್ನು ಬಿಟ್ಟು ಉಳಿದವರೂ ಐವರು ಮಹಿಳಾ ನ್ಯಾಯಮೂರ್ತಿಗಳು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರಿಂದ ಹೈಕೋರ್ಟ್‌ಗೆ ಬಡ್ತಿ ಪಡೆದವರು.
ಎಸ್.ಸುಜಾತ ಅವರು ವಕೀಲ ಸಮುದಾಯದಿಂದ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದವರು. ಆದರೆ, ಈವರೆಗೂ ಮಹಿಳಾ ನ್ಯಾಯಮೂರ್ತಿಗಳು ನೇತೃತ್ವದಲ್ಲಿ ವಿಭಾಗೀಯ ಪೀಠ ರಚನೆಯಾಗಿರಲಿಲ್ಲ ಎಂದು ಹೈಕೋರ್ಟ್ ವಕೀಲ ಗಂಗಾಧರ ಸಂಗೊಳ್ಳಿಯವರು ತಿಳಿಸಿದ್ದಾರೆ.







