ಸೆ.15: ಗ್ರಾಮಾಂತರ ಠಾಣಾಧಿಕಾರಿ, ಸಿಬ್ಬಂದಿ ವಿರುದ್ಧ ಪ್ರತಿಭಟನೆ
ಪುತ್ತೂರು, ಸೆ. 13: ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ದೌರ್ಜನ್ಯ ಎಸಗುತ್ತಿರುವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಕೋಮುವಾದಿ ಮತಾಂಧ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ದ ಹಿಂದೂ ಜಾಗರಣಾ ವೇದಿಕೆ ಪುತ್ತೂರು ತಾಲೂಕು ವತಿಯಿಂದ ಸೆ.15ರಂದು ಪುತ್ತೂರು ಮಿನಿವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ತಿಳಿಸಿದ್ದಾರೆ.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಬ್ದುಲ್ ಖಾದರ್, ಸಿಬಂದಿಗಳಾದ ಚಂದ್ರ, ರುಕ್ಮ ಮತ್ತು ಅಲ್ಲಿನ ಪೊಲೀಸರ ಕಾರ್ಯವೈಖರಿಯನ್ನು ವಿರೋಧಿಸಿ ಈ ಪ್ರತಿಭಟನೆ ನಡೆಯಲಿದ್ದು, ಶ್ರೀ ಮಹಾಲಿಂಗೇಶ್ವರ ದೇವಳದ ಬಳಿಯಿಂದ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಡೆಯಲಿರುವ ಪ್ರತಿಭಟನಾ ಸಭೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರಿಯಾ ಸಂಘಟನಾ ಕಾರ್ಯದರ್ಸಿ ಜಗದೀಶ್ ಕಾರಂತ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪ್ರತಿಭಟನೆಗೆ ಸಂಬಂಧಿಸಿ ಈಗಾಗಲೇ ನಾವು ಅನುಮತಿ ಕೇಳಿದ್ದೇವೆ. ಆದರೆ ಪೊಲೀಸ್ ಇಲಾಖೆಯಿಂದ ಅನುಮತಿ ನಿರಾಕರಿಸುವ ವ್ಯವಸ್ಥೆ ನಡೆಯುತ್ತಿದೆ. ಆದರೆ ನಮಗೆ ನ್ಯಾಯ ಸಿಗಬೇಕು. ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದರೂ ನಾವಂತೂ ಪ್ರತಿಭಟನೆ ನಡೆಸಿಯೇ ಸಿದ್ದ. ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದ ಅವರು ಸಂಪ್ಯ ಠಾಣಾಧಿಕಾರಿ ಕೋಮುವಾದಿ ಮತಾಂಧ ಪೊಲೀಸ್ ಅಧಿಕಾರಿಯಾಗಿ ವರ್ತಿಸುತ್ತಿದ್ದು, ಅವರು ಕಾರ್ಯ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳಬೇಕು. ಸಂವಿಧಾನಾತ್ಮಕ ಕಾನೂನು ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕೆಂದು ಆಗ್ರಹಿಸಿದ್ದೆವು. ಈ ಕುರಿತು ಪೊಲೀಸ್ ಮೇಲಧಿಕಾರಿಗಳಿಗೂ ದೂರು ನೀಡಿದ್ದೆವು ನಮ್ಮ ಮನವಿಗೆ ಬೆಲೆ ಸಿಗದ ಕಾರಣ ಸೆ.15ರಂದು ಸಂಜೆ 3ಗಂಟೆಗೆ ಸಂಪ್ಯ ಎಸ್‌ಐ ಅಬ್ದುಲ್ ಖಾದರ್ ವಿರುದ್ದ ಸೇರಿದಂತೆ ಎಎಸ್‌ಐ ರುಕ್ಮಾ ಮತ್ತು ಸಿಬ್ಬಂದಿ ಚಂದ್ರ ಅವರ ಕಾರ್ಯವೈಖರಿ ವಿರುದ್ದ ಪುತ್ತೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಅವರು ಗೋಕಳ್ಳರಿಗೆ ರಕ್ಷಣೆ ನೀಡುವ ಜೊತೆಗೆ ಅಕ್ರಮ ಗೋಸಾಗಾಟ ತಡೆದ ಗೋಪ್ರೇಮಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಅಮಾಯಕ ಯುವತಿಯರನ್ನು ಲವ್‌ಜಿಹಾದಿ ಹೆಸರಿನಲ್ಲಿ ವೇಶ್ಯಾವಾಟಿಕೆ, ಬಯೋತ್ಪಾದನಾ ಸಂಘಟನೆಗಳಿಗೆ ಸೇರಿಸುವ ಹುನ್ನಾರ ನಡೆಯುತ್ತಿದ್ದು, ಲವ್ ಜಿಹಾದಿ ಪ್ರಕರಣ ನಡೆದಾಗ ಈ ಕುರಿತು ಮಾಹಿತಿ ನೀಡಿದರೂ ಮುಸ್ಲಿಂ ಎಂಬ ಕಾರಣಕ್ಕಾಗಿ ಆರೋಪಿಯನ್ನು ರಕ್ಷಿಸಿತ್ತಿರುವ ಅವರು ಹಿಂದೂ ಸಂಘಟನೆಗಳ ಅಮಾಯಕರ ಕಾರ್ಯಕರ್ತರ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ತಮ್ಮ ಮೇಲೆ ದೌರ್ಜನ್ಯ ನಡೆದ ಸಂದರ್ಭದಲ್ಲಿ ದೂರು ನೀಡಲು ಠಾಣೆಗೆ ಹೋದರೆ ಎಸ್‌ಐ ಅಬ್ದುಲ್ ಖಾದರ್ ದೂರು ನೀಡಲು ಹೋದವರ ಮೇಲೆಯೇ ಸಂದೇಹ ವ್ಯಕ್ತಪಡಿಸಿ ಗದರಿಸಿ ಪ್ರಕರಣ ದಾಖಲಿಸಿಕೊಳ್ಳದೆ ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಹಿಂದೂ ಯುವತಿಯೊಬ್ಬಳನ್ನು ಲವ್‌ಜಿಹಾದಿ ಬಲೆಗೆ ಸೆಳೆಯಲು ಯತ್ನಿಸಿದ ಮುಸ್ಲಿಂ ಯುವಕನನ್ನು ವಿಚಾರಿಸಿ, ಆತನ ಮೊಬೈಲ್‌ನಲ್ಲಿದ್ದ 32 ಹಿಂದೂ ಯುವತಿಯರ ಮೊಬೈಲ್ ನಂಬ್ರವನ್ನು ಡಿಲೀಟ್ ಮಾಡಿದ್ದಾರೆಂಬ ಕಾರಣಕ್ಕಾಗಿ ಕೌಡಿಚ್ಚಾರಿನ ಒಬ್ಬ ವಿದ್ಯಾರ್ಥಿ ಸೇರಿದಂತೆ ಇಬ್ಬರು ಹಿಂದೂ ಸಂಘಟನೆಯ ಯುವಕರ ವಿರುದ್ದ ಪೋಸ್ಕೋ ಕಾಯ್ದೆ ದಾಖಲಿಸಿಕೊಂಡಿರುವುದು ಎಸ್‌ಐ ಅವರು ಲವ್‌ಜಿಹಾದಿಗೆ ನೇರ ಬೆಂಬಲ ನೀಡುತ್ತಿದ್ದಾರೆ ಎಂಬುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.
ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಖಂಡನೀಯವಾಗಿದ್ದು, ಇದೊಂದು ಸೈದ್ಧಾಂತಿಕ ವಿಚಾರಕ್ಕೆ ಸಂಬಂಧಪಟ್ಟ ಹತ್ಯೆಯಲ್ಲ. ಆದರೆ ಕೆಲವರು ಈ ಹತ್ಯೆಯ ಹೊಣೆಯನ್ನು ಸಂಘಪರಿವಾರ ಸಂಘಟನೆಗಳ ಮೇಲೆ ಹಾಕುವ ಪ್ರಯತ್ನ ನಡೆಸಿದ್ದಾರೆ. ಇದು ಸರಿಯಲ್ಲ. ಯಾವುದೇ ವಿಚಾರದಲ್ಲಿ ಏಕಾಏಕಿ ತೀರ್ಮಾನ ಕೈಗೊಳ್ಳುವುದು ಸಮಂಜಸವಲ್ಲ. ಈ ಪತ್ರಕರ್ತೆಯ ಹತ್ಯೆ ಹಿಂದಿರುವ ನಿಜವಾದ ಕೊಲೆಗಾರರನ್ನು ಹಿಡಿದು ಶಿಕ್ಷೆ ವಿಧಿಸಬೇಕು ಎಂದು ರಾಧಾಕೃಷ್ಣ ಅಡ್ಯಂತಾಯ ಹೇಳಿದರು.
ಮುಖಂಡ ಅರುಣ್‌ಕುಮಾರ್ ಪುತ್ತಿಲ, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ತಾಲ್ಲೂಕು ಕಾರ್ಯದರ್ಶಿ ಕಾರ್ತಿಕ್ ಸಂಪ್ಯ, ಸಹ ಸಂಚಾಲಕ ದಿನೇಶ್ ಪುರುಷರಕಟ್ಟೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.







