ಶಿಕಾರಿಪುರ : ಭಾರಿ ಗಾಳಿ ಮಳೆಗೆ ಕೃಷಿ ಹಾನಿ

ಶಿಕಾರಿಪುರ,ಸೆ.14:ಮಂಗಳವಾರ ತಡರಾತ್ರಿ ಪಟ್ಟಣ ವ್ಯಾಪ್ತಿಯಲ್ಲಿ ಭಾರಿ ಗಾಳಿ ಮಳೆಗೆ ಲಕ್ಷಾಂತರ ಬೆಲೆಬಾಳುವ ಅಡಿಕೆ, ಬಾಳೆ,ಮೆಕ್ಕೆಜೋಳ ಬೆಳೆ ಧರೆಗುರುಳಿದ್ದು,ಇದರೊಂದಿಗೆ ಹಲವು ಮನೆಯ ಹಂಚು ತಗಡು ಹಾರಿಹೋಗಿ ರೈತ ಸಮುದಾಯ ಹಾಗೂ ಜನತೆ ತತ್ತರಿಸಿರುವ ಘಟನೆ ಸಂಭವಿಸಿದೆ.
ಮಂಗಳವಾರ ರಾತ್ರಿ ಪಟ್ಟಣದ ಸುತ್ತಮುತ್ತ ಬೀಸಿದ ಭಾರಿ ಗಾಳಿ ಮಳೆಯಿಂದಾಗಿ ಹೊರವಲಯ ಆಶ್ರಯ ಬಡಾವಣೆ,ಸಾಲೂರು ರಸ್ತೆಯ ಎರಡು ಬದಿಯಲ್ಲಿನ ನೂರಾರು ಎಕರೆ ಮೆಕ್ಕೆಜೋಳ ಸಂಪೂರ್ಣ ನಾಶವಾಗಿದ್ದು 3 ತಿಂಗಳ ಬೆಳೆ ಕಟಾವಿಗೆ ಸಮೀಪಿಸುತ್ತಿರುವ ಸಂದರ್ಬದಲ್ಲಿ ಪ್ರಕೃತಿಯ ವಿಕೋಪಕ್ಕೆ ಸಿಲುಕಿದ್ದು ಇದರಿಂದಾಗಿ ರೈತ ಸಮುದಾಯ ಲಕ್ಷಾಂತರ ಬೆಲೆಯ ಬೆಳೆ ನಷ್ಟದಿಂದ ಚಿಂತಾಕ್ರಾಂತರಾಗಿದ್ದಾರೆ. ಇದರೊಂದಿಗೆ ಸತತ 10-20 ವರ್ಷದ ಅಡಿಕೆ ಮರ ಧರೆಗುರುಳಿದ್ದು ಗಾಳಿ ಮಳೆಯ ಭೀಕರತೆಗೆ ಸಾಕ್ಷಿಯಾಗಿದೆ.
ಆಶ್ರಯ ಬಡಾವಣೆ ಸಮೀಪದ ಕಾನೂರು ಸ.ನಂ 84 ರಲ್ಲಿನ ನಿಂಗೋಜಿರಾವ್ ಎಂಬವವರ 1.5 ಎಕರೆ ತೋಟದಲ್ಲಿನ ಫಸಲು ಭರಿತ ಅಡಿಕೆಯ ನೂರಾರು ಮರಗಳು ಗಾಳಿ ಮಳೆಯಿಂದಾಗಿ ಧರೆಗುರುಳಿದೆ.ಸತತ 18-20 ವರ್ಷದಿಂದ ಆರೈಕೆಯ ಅಡಿಕೆ ಮರ ಫಸಲಿಗೆ ಬರುವ ಸಂದರ್ಬದಲ್ಲಿ ಪ್ರಕೃತಿಯ ವಿಕೋಪಕ್ಕೆ ನಲುಗಿದ್ದು ಇದರೊಂದಿಗೆ ತೆಂಗಿನ ಮರ,ವಿವಿಧ ಜಾತಿಯ ಮರಗಳು ಹಾನಿಗೆ ಸಾಕ್ಷಿಯಾಗಿದೆ.
ಆಶ್ರಯ ಬಡಾವಣೆಯಲ್ಲಿ ಹಲವು ಮನೆಯ ಹೆಂಚು ಮೇಲ್ಚಾವಣಿ ಹಾರಿಹೋಗಿದ್ದು ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.ವಿದ್ಯುತ್ ತಂತಿ ತುಂಡಾಗಿ ರಸ್ತೆಯಲ್ಲಿ ಮರ ಬಿದ್ದು ಆಶ್ರಯ ಬಡಾವಣೆಯ ರಸ್ತೆ ಸಂಪರ್ಕ ಕೆಲ ಕಾಲ ತೊಂದರೆಯಾಗಿತ್ತು.ಹಲವು ಎಕರೆ ಜಾಗದಲ್ಲಿನ ಮೆಕ್ಕೆಜೋಳ ಫಸಲು ನಾಶದ ಬಗ್ಗೆ ರೈತ ಕರುಣೇಶ, ದಿಲೀಪಕುಮಾರ್ ಮತ್ತಿತರರು ಅನಾವೃಷ್ಠಿ,ಅತಿವೃಷ್ಠಿಯನ್ನು ಎದುರಿಸಿ ಇದೀಗ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಸಂದರ್ಬದಲ್ಲಿ ಗಾಳಿ ಮಳೆಯ ಆರ್ಭಟದಿಂದ ಧರೆಗುರುಳಿದ್ದು ,ಕೃಷಿಯನ್ನು ಅವಲಂಭಿಸಿದ ರೈತರ ಸ್ಥಿತಿ ನೀರಿನ ಮೇಲಿನ ಗುಳ್ಳೆಯ ರೀತಿಯಾಗಿದ್ದು ಸರ್ಕಾರ ಸೂಕ್ತ ಪರಿಹಾರದ ಮೂಲಕ ರೈತರನ್ನು ಸಂಕಷ್ಟದಿಂದ ಪಾರುಮಾಡುವಂತೆ ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ತೆರಳಿ ನಷ್ಟದ ಅಂದಾಜು ಮಾಹಿತಿಯನ್ನು ಸಂಗ್ರಹಿಸಿದ್ದಾರೆ.







