ಮೋಸ ಮಾಡಿದ ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ

ಚಿಕ್ಕಮಗಳೂರು,ಸೆ.13:ಸಾಲ ತೆಗೆದುಕೊಂಡು ಮೋಸಮಾಡಿ ವಂಚಿಸಿದ ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನಗರದ ಸಿ.ಜಿ.ಎಂ. ನ್ಯಾಯಾಲಯವು ತೀರ್ಪು ನೀಡಿದೆ.
2007 ಡಿ.11 ರಂದು ಚಿಕ್ಕಮಗಳೂರಿನ ಐ.ಜಿ. ರಸ್ತೆಯ ಶ್ರೀರಾಮ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂಪನಿಯಲ್ಲಿ ಆರೋಪಿ ಅಕ್ಬರ್ ಅಹಮದ್ ಹೊಸ ಲಾರಿಯನ್ನು ತೆಗೆದುಕೊಳ್ಳಲು ಅಗತ್ಯ ದಾಖಲಾತಿಗಳನ್ನು ನೀಡಿಸಾಲ ಪಡೆದು ಒಟ್ಟು 13,90,500ರೂಗಳನ್ನು ಫೈನಾನ್ಸ್ ಕಂಪನಿಗೆ ಕೊಡಬೇಕಾಗಿತ್ತು. ಆರೋಪಿ ಸಾಲ ಮರುಪಾವತಿ ಮಾಡದೆ ಅಪ್ರಮಾಣಿಕತನದಿಂದ ಆರ್.ಟಿ.ಓ ಕಛೇರಿಗೆ ಫಾರಂ 35ನ್ನು ಭರ್ತಿ ಮಾಡಿ ಫೈನಾನ್ಸ್‌ನ ಸೀಲು ಹಾಕಿ ಫೈನಾನ್ಸ್‌ನ ಅಧಿಕಾರಿಯಂತೆ ಪೋರ್ಜರಿ ಸಹಿ ಮಾಡಿ ನೀಡಿ ಸದರಿ ಲಾರಿಯ ಹೈಪಾಥಕೇಶನ್ ವಜಾ ಮಾಡಿಸಿ ಲಾರಿಯನ್ನು ಬೇರೆಯವರಿಗೆ ಮಾರಾಟ ಮಾಡಿದ.
ಈ ಹಿನ್ನೆಲೆಯಲ್ಲಿ ಫೈನಾನ್ಸ್ ನವರು ದೂರು ನೀಡಿದ ಹಿನ್ನೆಲೆ ಆರೋಪಿಯ ವಿರುದ್ಧ ಕಲಂ 405, 420, 465, 468 ರೆ/ವಿ 34 ಐಪಿಸಿ ಅಡಿಯಲ್ಲಿ ಚಿಕ್ಕಮಗಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಸಿ.ಜಿ.ಎಂ. ನ್ಯಾಯಾಧೀಶ ಬಸವರಾಜ್ ಚೇಂಗಟಿ ಆರೋಪಿ ಅಕ್ಬರ್ ಅಹಮದ್‌ನಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ 5,000ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಕೆ.ಎಸ್.ವೀಣಾ ವಾದ ಮಂಡಿಸಿದ್ದರು.







