ಇವತ್ತಿನ ಹೋರಾಟಗಾರರು ಕನ್ನಡವನ್ನೇ ಕೊಂದು ಬದುಕುತ್ತಿದ್ದಾರೆ: ಸಾಹಿತಿ ಬನ್ನೂರು ಕೆ.ರಾಜು

ಮೈಸೂರು,ಸೆ.13: ಇವತ್ತಿನ ಹೋರಾಟಗಾರರು ಕನ್ನಡವನ್ನೇ ಕೊಂದು ಬದುಕುತ್ತಿದ್ದಾರೆ. ಅಂತಹವರಿಗೆ ಹನುಮಂತಶೆಟ್ಟರು ಸ್ಪೂರ್ತಿಯಾಗಿ ನಿಲ್ಲುತ್ತಾರೆ ಎಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಸೂರು ಕನ್ನಡ ವೇದಿಕೆ ವತಿಯಿಂದ ಇತ್ತೀಚೆಗೆ ನಿಧನರಾದ ಕನ್ನಡ ಪರ ಹೋರಾಟಗಾರ ಗೋ.ಹನುಮಂತಶೆಟ್ಟಿ ಅವರಿಗೆ ಗನ್‍ಹೌಸ್‍ನಲ್ಲಿರುವ ಕುವೆಂಪು ಉದ್ಯಾನವನದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಹನುಮಂತಶೆಟ್ಟಿ ಅವರ ಹೋರಾಟ ಮೈಸೂರು ಜೈಲಿನಿಂದ ತಮಿಳುನಾಡಿನ ತಾಳವಾಡಿ ಜೈಲಿನವರೆಗೂ ವ್ಯಾಪಿಸಿದೆ. ಕುವೆಂಪು ಅವರು ಕನ್ನಡಕ್ಕಾಗಿ ಕೈ ಎತ್ತು ನಿನ್ನ ಬಾಳು ಕಲ್ಪವೃಕ್ಷವಾಗುತ್ತದೆ ಎಂದು ಹೇಳುತ್ತಿದ್ದರು. ಅಂತೆಯೇ ಹನುಮಂತಶೆಟ್ಟಿ ಅವರು ಕನ್ನಡ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾ ತಮ್ಮ ಜೀವ ಹಾಗೂ ಜೀವಮಾನವನ್ನೆಲ್ಲಾ ಕನ್ನಡಕ್ಕಾಗಿಯೇ ಸವೆಸಿದರು. ಸದಾ ಕನ್ನಡದ ದಾರಿಯಲ್ಲಿಯೇ ನಡೆಯುತ್ತಿದ್ದ ಅವರ ಹೋರಾಟವನ್ನು ಮೈಸೂರು ಭಾಗದ ಜನತೆ ಎಂದಿಗೂ ಮರೆಯುವುದಿಲ್ಲ. ಅಂತಹ ಪ್ರಾಮಾಣಿಕತೆ ಅವರಲ್ಲಿತ್ತು. ಆದರೆ ಇವತ್ತಿನ ಹೋರಾಟಗಾರರು ಕನ್ನಡವನ್ನೇ ಕೊಂದು ಬದುಕುತ್ತಿದ್ದಾರೆ. ಅಂತಹವರಿಗೆ ಹನುಮಂತಶೆಟ್ಟರು ಸ್ಪೂರ್ತಿಯಾಗಿ ನಿಲ್ಲುತ್ತಾರೆ ಎಂದ ಅವರು, ಹನುಮಂತಶೆಟ್ಟರ ನಿಧನದಿಂದ ಕನ್ನಡ ಚಳವಳಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಈ ವೇಳೆ ಕನ್ನಡಪರ ಹೋರಾಟಗಾರರಾದ ಎ.ಬಿ.ದೊಡ್ಡೇಗೌಡ, ಎಂ.ಬಿ.ವಿಶ್ವನಾಥ್, ತಾರಾ ಸುದರ್ಶನ್, ಸಂಸ್ಕೃತಿ ಸುಬ್ರಹ್ಮಣ್ಯ, ಗುಬ್ಬಿಗೂಡು ರಮೇಶ್, ಕನ್ನಡ ಕ್ರಾಂತಿ ದಳದ ಸತ್ಯಪ್ಪ, ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಕಲಾವಿದ ಅಶೋಕಪುರಂ ರೇವಣ್ಣ, ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಪತ್ರಕರ್ತ ಹೊಮ್ಮ ಮಂಜುನಾಥ್, ಡಿ.ಪಿ.ಪರಮೇಶ್, ಗುರುಬಸಪ್ಪ, ಸುನಿಲ್ ಕುಮಾರ್, ರಾಜೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





