ಸಚಿವ ಮಹದೇವಪ್ಪ ಪುತ್ರನಿಗೆ ಮತ್ತೆ ಸಂಕಷ್ಟ
ಸೆ.26 ರಂದು ಸುನೀಲ್ ಬೋಸ್ ಕೋರ್ಟ್‍ಗೆ ಕುದ್ದು ಹಾಜರಾಗುವಂತೆ ಆದೇಶ
ಮೈಸೂರು,ಸೆ.13: ಮರಳು ಪರವಾನಿಗೆ ಪಡೆಯಲು ಲಂಚ ಸ್ವೀಕರಿಸುವಂತೆ ಒತ್ತಡ ಹೇರಿದ್ದಾರೆನ್ನಲಾದ ಪ್ರಕರಣದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್ ಮೊದಲನೇ ಆರೋಪಿ ಎಂದು ನಗರದ ಮೂರನೇ ಅಧಿಕ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಪರಿಗಣಿಸಿದೆ.
ಇದೇ ತಿಂಗಳ 26 ರಂದು ನ್ಯಾಯಾಲಯಕ್ಕೆ ಖುದ್ದು ಸುನೀಲ್ ಬೋಸ್ ಹಾಜರಾಗುವಂತೆ ಆದೇಶ ಹೊರಡಿಸಿದೆ.
ಮರಳು ಪರವಾನಿಗೆ ಪಡೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂದಿನ ವಿಜ್ಞಾನಿ ಅಲ್ಫೋನಿಸಿಸ್‍ಗೆ ಲಂಚ ಪಡೆಯುವಂತೆ ಒತ್ತಡ ಹೇರಿದ್ದರು ಎಂದು ಸುನೀಲ್ ಬೋಸ್ ಹಾಗೂ 2ನೇ ಆರೋಪಿ ರಾಜು ಎಂಬುವರನ್ನು ಆರೋಪಿಗಳೆಂದು ಪರಿಗಣಿಸಿ ವಿಚಾರಣೆ ನಡೆಸಬೇಕೆಂದು ದೂರುದಾರ ಬಸವರಾಜ ಇಂದು ನಗರದ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಸುದೀಂದ್ರನಾಥ್ ಮುಂದೆ ಬಲವಾದ ಸಾಕ್ಷಿ ನುಡಿದರು.
ಈ ಹಿನ್ನಲೆಯಲ್ಲಿ ನ್ಯಾಯಾಧೀಶರು ಪ್ರಕರಣದಲ್ಲಿ ಸಚಿವರ ಪುತ್ರ ಸುನೀಲ್ ಬೋಸ್‍ರನ್ನು ಒಂದನೇ ಆರೋಪಿಯಾಗಿ ಹಾಗೂ ರಾಜು ಎಂಬಾತನನ್ನು 2ನೇ ಆರೋಪಿಯಾಗಿ ಪರಿಗಣಿಸಿ ವಿಚಾರಣೆಗೆ ಇದೇ ತಿಂಗಳ 26ರಂದು ಖುದ್ದು ಹಾಜರಾಗುವಂತೆ ಆದೇಶಿಸಿದ್ದಾರೆ.





