ಮಾದಕ ದ್ರವ್ಯ ಸೇವನೆಯಿಂದ ಮನುಕುಲ ನಾಶ : ವಿವೇಕ್ ವಿನ್ಸೆಂಟ್ ಪಾಯಸ್

ಮಂಡ್ಯ, ಸೆ.13: ಮಾದಕ ದ್ರವ್ಯ ಸೇವನೆಯಿಂದ ಮನುಕುಲ ನಾಶವಾಗುತ್ತಿದೆ ಎಂದು ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಆತಂಕ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಮಗರದ ರೋಟರಿ ವಿದ್ಯಾಸಂಸ್ಥೆಯಲ್ಲಿ ಬುಧವಾರ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಮಾದಕ ದ್ರವ್ಯ ವ್ಯಸನದಿಂದ ಹಲವು ರಾಜರೇ ಅವಸಾನವಾದ ಉದಾಹರಣೆಗಳಿಗೆ. ಪ್ರಪಂಚದಲ್ಲಿ ಹಾಳಾಗಲು ಸಾವಿರಾರು ದಾರಿಗಳಿವೆ. ಅದರಲ್ಲಿ ಮಾದಕ ದ್ರವ್ಯ, ಮಾದಕ ವ್ಯಸನ ಮೊದಲ ಸ್ಥಾನದಲ್ಲಿವೆ ಎಂದು ಅವರು ಹೇಳಿದರು.
ಕೆಲ ದುಷ್ಟರು ಯುವತಿಯರನ್ನು ತಮ್ಮತ್ತ ಸೆಳೆದುಕೊಳ್ಳಲು ಚಾಕಲೇಟ್‍ಗಳಲ್ಲಿ ಡ್ರಗ್ಸ್ ಕೊಡುತ್ತಾರೆ. ಸಿಗರೇಟ್‍ನಲ್ಲಿ ಡ್ರಗ್ಸ್ ಕೊಟ್ಟು ಯುವಕರನ್ನು ಹಾಳು ಮಾಡುತ್ತಾರೆ. ಇಂತಹವುಗಳಿಗೆ ತಡೆಯೊಡ್ಡಬೇಕಾಗಿದೆ ಎಂದು ಅವರು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಸಿ.ಕೆ.ರವಿಕುಮಾರ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಸದಾನಂದ ಬಂಗೇರ, ಯೋಗೇಶ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಶಿವಣ್ಣ, ಈರೇಗೌಡ, ಬಸವಲಿಂಗಪ್ಪ, ರೋಟರಿ ಸಂಸ್ಥೆ ಕೋಶಾಧ್ಯಕ್ಷ ಮೃತ್ಯುಂಜಯ ಉಪಸ್ಥಿತರಿದ್ದರು.







