ಪ್ರಥಮ ವರ್ಷದ ಇಂಜಿನಿಯರಿಂಗ್ ನೋಟ್ಸ್ನ ಮೊಬೈಲ್ ಆ್ಯಪ್
ಒಂಬತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕೊಡುಗೆ
* ಉಚಿತ ಆ್ಯಪ್ ಸೆ.16ರಿಂದ ವಿದ್ಯಾರ್ಥಿಗಳಿಗೆ ಲಭ್ಯ
ಮಂಗಳೂರು, ಸೆ. 14: ಇಂಜಿನಿಯರಿಂಗ್ನ ವಿವಿಧ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೋಟ್ಸ್ಗಳ ಮೊಬೈಲ್ ಆ್ಯಪ್ ತಯಾರಿಸುವ ಮೂಲಕ ಒಂಬತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಗಮನ ಸೆಳೆದಿದ್ದಾರೆ. ಎಂಟು ತಿಂಗಳ ಅವಧಿಯಲ್ಲಿ ಈ ವಿದ್ಯಾರ್ಥಿಗಳು ನೋಟ್ಸ್ಗಳ ಈ ಮೊಬೈಲ್ ಆ್ಯಪ್ ತಯಾರಿಸಿದ್ದಾರೆ. ಸೆ.16ರಂದು ಸಂಜೆ 4 ಗಂಟೆಗೆ ಕಂಕನಾಡಿಯ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಭಾಂಗಣದಲ್ಲಿ ಅನಾವರಣಗೊಳ್ಳುವುದರೊಂದಿಗೆ ಈ ಆ್ಯಪ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಲಭ್ಯವಾಗಲಿದೆ.
ತಾನು ಪ್ರಥಮ ಪಿಯುಸಿಯಲ್ಲಿರುವಾಗಲೇ 10ನೆ ತರಗತಿಯ ಗಣಿತ ಪಠ್ಯದ ಸಮಸ್ಯೆಗಳನ್ನು ಬಗೆಹರಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದ ಮೂಡುಬಿದಿರೆ ನಿವಾಸಿ ಇಂಜಿನಿಯರಿಂಗ್ ವಿದ್ಯಾರ್ಥಿ ರಾಹುಲ್ ಪೈ ನೇತೃತ್ವದಲ್ಲಿ ಇತರ ಎಂಟು ವಿದ್ಯಾರ್ಥಿಗಳು ಜೊತೆಯಾಗಿ ಈ ಆ್ಯಪ್ ತಯಾರಿಸಿದ್ದಾರೆ.
ಪ್ರಸ್ತುತ ನಿಟ್ಟೆಯ ಮೆಕ್ಯಾನಿಕಲ್ ಇಂಜಿನಿಯರಿಂಗ್ನ 5ನೆ ಸೆಮಿಸ್ಟರ್ನಲ್ಲಿ ಓದುತ್ತಿರುವ ರಾಹುಲ್ ಆರ್. ಪೈ, ಕಂಪ್ಯೂಟರ್ ಸಯನ್ಸ್ ಆ್ಯಂಡ್ ಇಂಜಿನಿಯರಿಂಗ್ನ 5ನೆ ಸೆಮಿಸ್ಟರ್ ವಿದ್ಯಾರ್ಥಿನಿ ಪೂಜಾ ಶೆಟ್ಟಿ, ವಿಶ್ವುಲ್ ಡಿಸೈನರ್- ಇಲ್ಯುಸ್ಟ್ರೇಟರ್-ಟೈಪೋಗ್ರಾಫರ್- ಫೋಟೋಗ್ರಾಫರ್- ಲೇಖಕಿಯೂ ಆಗಿರುವ ದೀಪ್ತಿ ಪೈ, ಬೆಂಗಳೂರಿನ ಬಿಎಂಎಸ್ಸಿಇ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ನ 5ನೆ ಸೆಮಿಸ್ಟರ್ ವಿದ್ಯಾರ್ಥಿ ಪ್ರಜ್ವಲ್ ಲಿಂಗದ್, ಅದೇ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ 5ನೆ ಸೆಮಿಸ್ಟರ್ ವಿದ್ಯಾರ್ಥಿನಿ ಶೀತಲ್ ಎಚ್.ಎಂ., ಬೆಂಗಳೂರಿನ ಬಿಎಂಎಸ್ ಕಾಲೇಜನ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ನ 3ನೆ ಸೆಮಿಸ್ಟರ್ ವಿದ್ಯಾರ್ಥಿನಿ ಅರ್ಪಿತಾ ಅಂಕಲಗಿ, ನಿಟ್ಟೆಯ ಇನ್ಫಾರ್ಮೇಶನ್ ಸಯನ್ಸ್ ಇಂಜಿನಿಯರಿಂಗ್ನ 3ನೆ ವರ್ಷದ ವಿದ್ಯಾರ್ಥಿನಿ ಸಾಧನಾ ಮಯ್ಯ, ನಿಟ್ಟೆಯ ಮೆಕ್ಯಾನಿಕಲ್ ಇಂಜಿನಿಯರಿಂಗ್ನ 5ನೆ ಸೆಮಿಸ್ಟರ್ ವಿದ್ಯಾರ್ಥಿಗಳಾದ ಮುಹಮ್ಮದ್ ಮುಬೀನ್ ಶೇಖ್ ಹಾಗೂ ಪ್ರಜ್ವಲ್ ಪಿ. ಸೇರಿ ಈ ಮೊಬೈಲ್ ಆ್ಯಪ್ ತಯಾರಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿಂದು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಸಲಹೆಗಾರ ರಫೀಕ್ ಮಾಸ್ಟರ್ ತಿಳಿಸಿದರು.
ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ‘ಟ್ಯಾಲೆಂಟ್’ ವಿದ್ಯಾರ್ಥಿಗಳ ಈ ಸಾಧನೆಯನ್ನು ಗಮನಿಸಿ ಆ್ಯಪನ್ನು ಅದನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ‘ಇಂಜಿನೆರಾ’ ಹೆಸರಿನಲ್ಲಿ ಈ ಮೊಬೈಲ್ ಆ್ಯಪನ್ನು ಆಳ್ವಾಸ್ ಎಜುಕೇಶನ್ ಫೌಂಡೇಶನ್ನ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಬಿಡುಗಡೆಗೊಳಿಸಲಿರುವರು.
ಮುಖ್ಯ ಅತಿಥಿಗಳಾಗಿ ರಾಜೀವ್ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸಾಯನ್ಸ್ನ ಸೆನೆಟ್ ಸದ್ಯ ಡಾ.ಯು.ಟಿ. ಇಫ್ತಿಕಾರ್ ಅಲಿ, ನಿಟ್ಟೆ ವಿವಿಯ ರಿಜಿಸ್ಟ್ರಾರ್ ಡಾ.ಎಂ.ಎಸ್.ಮೂಡಿತ್ತಾಯ, ಸಂತ ಅಲೋಶಿಯಸ್ ಕಾಲೇಜಿನ ಮಾಜಿ ಪ್ರಾಂಶುಪಾಲ ಹಾಗೂ ರೆಕ್ಟರ್ ಫಾ.ಲಿಯೋ ಡಿಸೋ, ನೋವಿಗೋ ಸೊಲ್ಯೂಷನ್ಸ್ನ ಸಹ ಸ್ಥಾಪಕ ಮುಹಮ್ಮದ್ ಹನೀಫ್ ಭಾಗವಹಿಸಲಿದ್ದಾರೆ.
ಟ್ಯಾಲೆಂಟ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ ಎಂದು ರಫೀಕ್ ಮಾಸ್ಟರ್ ಹೇಳಿದರು.
ಆ್ಯಪ್ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರಿಂಗ್ ವಿದ್ಯಾರ್ಥಿ ರಾಹುಲ್ ಆರ್. ಪೈ, ರಾಜ್ಯದ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಈ ಆ್ಯಪ್ ಸಹಕಾರಿಯಾಗಲಿದೆ ಎಂದರು.
ಇಂಜಿನಿಯರಿಂಗ್ ನೋಟ್ಸ್ನ ಈ ಮೊಬೈಲ್ ಆ್ಯಪ್ ಉಚಿತವಾಗಿದ್ದು, ಆ್ಯಂಡ್ರಾಯ್ಡ್ ಫೋನ್ನ ಗೂಗಲ್ ಪ್ಲೇಸ್ಟೋರ್ನಲ್ಲಿ ಒಂದು ಬಾರಿ ಡೌನ್ಲೋಡ್ ಮಾಡಿಕೊಂಡಲ್ಲಿ ಬಳಿಕ ಇದನ್ನು ತೆರೆಯಲು ಡಾಟಾದ ಅಗತ್ಯವಿರುವುದಿಲ್ಲ. ಜನವರಿಯಿಂದ ಈ ಆ್ಯಪ್ ತಯಾರಿಯನ್ನು ಆರಂಭಿಸಿದ್ದು, ಒಂಬತ್ತು ಮಂದಿ ದಿನವೊಂದಕ್ಕೆ ತಲಾ 4 ಗಂಟೆಗಳಂತೆ ಈ ವ್ಯಯಿಸಿದ್ದೇವೆ. ಮೊಬೈಲ್ ಆ್ಯಪ್ನಲ್ಲಿ ವಾಣಿಜ್ಯ ಜಾಹೀರಾತುಗಳ ಹೊರತಾಗಿ ಇದನ್ನು ಉಚಿತವಾಗಿ ನಮ್ಮ ಕಿರಿಯ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ. ಮೆಕ್ಯಾನಿಕಲ್, ಸಿವಿಲ್, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸಾಯನ್ಸ್ ಆ್ಯಂಡ್ ಇನ್ಫಾರ್ಮೇಶನ್ ವಿಭಾಗದ ನೋಟ್ಸ್ಗಳು ಆ್ಯಪ್ನಲ್ಲಿ ಲಭ್ಯವಾಗಲಿವೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಮುಹಮ್ಮದ್ ಮುಬೀನ್ ಶೇಖ್, ಪ್ರಜ್ವಲ್ ಪಿ., ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಅಧ್ಯಕ್ಷ ರಿಯಾಝ್ ಅಹ್ಮದ್ ಕಣ್ಣೂರು ಉಪಸ್ಥಿತರಿದ್ದರು.