ಪದವೀಧರ ಕ್ಷೇತ್ರದ ಚುನಾವಣೆಗಳಿಗೆ ಕಾಂಗ್ರೆಸ್ ಪಕ್ಷ ಸರ್ವ ಸನ್ನದ್ಧ: ಮಂಜುನಾಥ್ ಕುಮಾರ್

ಕಡೂರು, ಸೆ.14: 2018ನೆ ಸಾಲಿನ ನಡೆಯುವ ವಿಧಾನಸಭೆ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಗಳಿಗೆ ಕಾಂಗ್ರೆಸ್ ಪಕ್ಷ ಸರ್ವ ಸನ್ನದ್ಧ ವಾಗಿದ್ದು, ತನ್ನದೆ ಆದ ತಂತ್ರಗಾರಿಕೆ ರೂಪಿಸಿದೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಕೆ. ಮಂಜುನಾಥ್‍ಕುಮಾರ್ ಹೇಳಿದರು.
ಅವರು ಗುರುವಾರ ಪಟ್ಟಣದ ಲಯನ್ಸ್ ಕ್ಲಬ್ ಭವನದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕಳೆದ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಬಿಜೆಪಿ ಅಭ್ಯರ್ಥಿಗಳ ಎದುರು ಅಲ್ಪಮತಗಳ ಅಂತರದಿಂದ ಪರಭಾವಗೊಂಡಿದ್ದರು ಎಂದರು.
ಶಿಕ್ಷಕ ಮತ್ತು ಪದವೀಧರ ಕ್ಷೇತ್ರದಿಂದ ಜಯಗಳಿಸಿದ್ದ ಬಿಜೆಪಿಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಡಿ.ಎಚ್. ಶಂಕರಮೂರ್ತಿ ಅವರುಗಳು ಪದವೀಧರರ ಹಾಗೂ ಶಿಕ್ಷಕರಿಗೆ ಯಾವುದೇ ನ್ಯಾಯ ಒದಗಿಸಿಲ್ಲ. ಸದನದಲ್ಲಿ ಒಮ್ಮೆಯೂ ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಿಲ್ಲ ಎಂದು ಆರೋಪಿಸಿದರು.
ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜು ಶಿಕ್ಷಕರ ನಡುವೆ ಇರುವ ವೇತನ ತಾರತಮ್ಯವನ್ನು ಸರಿಪಡಿಸಲು ಇವರು ಪ್ರಯತ್ನ ಪಡಲಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಂದಿನ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಸಮಸ್ಯೆ ಬಗೆಹರಿಸಿದರು. ಗೆಲ್ಲುವ ಶಕ್ತಿ ಇಲ್ಲದಿದ್ದರೂ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿ ಬಿಜೆಪಿ ಪಕ್ಷಕ್ಕೆ ಸಹಾಯ ಮಾಡುವ ಜೆಡಿಎಸ್ ಪಕ್ಷ ಹಾಗೂ ಬಿಜೆಪಿ ಪಕ್ಷದವರು ವೇತನ ತಾರತಮ್ಯ ನೀತಿಯನ್ನು ಕಾಂಗ್ರೆಸ್ ಪಕ್ಷ ಬಗೆಹರಿಸಿರುವುದನ್ನು ಕಂಡು ವಿಚಲಿತರಾಗಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಆಡಳಿತ ನಡೆಸಿದ್ದ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ವೇತನ ಆಯೋಗ ಸಮಿತಿಯನ್ನು ರಚಿಸಿರಲಿಲ್ಲ. ಇದರಿಂದ ಶಿಕ್ಷಕರಿಗೆ ಸಿಗಬೇಕಾದ ಸವಲತ್ತುಗಳು ಸಿಕ್ಕಿರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರುತ್ತಿದ್ದಂತೆ ಆಯೋಗ ರಚಿಸಿ ವೇತನ ತಾರತಮ್ಯ ನೀತಿಯಲ್ಲಿ ಮಾರ್ಪಾಡು ಮಾಡಿದ್ದು. ಶಿಕ್ಷಕರಿಗೆ ಭತ್ಯೆ ಸಿಗುವುದಕ್ಕೆ ಕಾರಣವಾಗಿದೆ. ತಮ್ಮ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ 2,600 ಉಪನ್ಯಾಸಕರನ್ನು ನೇಮಕ ಮಾಡಿಕೊಂಡಿದ್ದು. ಇದು ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಅನುಕೂಲಕರವಾದ ವಾತಾವರಣವನ್ನು ಕಲ್ಪಿಸಿದೆ ಎಂದರು.
ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ದಿನೇಶ್, ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ, ಕಡೂರು ಮತ್ತು ಬಿರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಚ್. ಚಂದ್ರಪ್ಪ, ಕೆ.ಎಂ. ವಿನಾಯಕ್, ಜಿಲ್ಲಾ ಪಂಚಾಯತ್ ಸದಸ್ಯರಾದ ಲೋಲಾಕ್ಷಿಬಾಯಿ. ಕೆ.ಆರ್. ಮಹೇಶ್ ಒಡೆಯರ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಪ್ರಸನ್ನ, ಮುಖಂಡರಾದ ಕೆ.ಎಸ್. ಆನಂದ್, ಸುಜಾತಚಂದ್ರಶೇಖರ್, ಪುರಸಭೆ ಸದಸ್ಯ ಸೋಮಶೇಖರ್, ವಕ್ತಾರ ಬಾಸೂರು ಚಂದ್ರಮೌಳಿ ಉಪಸ್ಥಿತರಿದ್ದರು.







