ಪ್ರೊ. ಅಮೃತ ಸೋಮೇಶ್ವರರಿಗೆ ಭಾಷಾ ಸಮ್ಮಾನ್ ಪ್ರಶಸ್ತಿ ಪ್ರದಾನ
ಆಸ್ಪತ್ರೆಯಲ್ಲಿ ಸನ್ಮಾನಿಸಿದ ಡಾ. ಚಂದ್ರಶೇಖರ ಕಂಬಾರ

ಮಂಗಳೂರು, ಸೆ.14: ಕೇಂದ್ರ ಸಾಹಿತ್ಯ ಅಕಾಡಮಿ ವತಿಯಿಂದ ತುಳು ಭಾಷೆಗೆ ನೀಡಿದ ಕೊಡುಗೆಗಾಗಿ ಪ್ರೊ. ಅಮೃತ ಸೋಮೇಶ್ವರ ಅವರಿಗೆ ನೀಡಲಾದ ಭಾಷಾ ಸಮ್ಮಾನ್ ಪ್ರಶಸ್ತಿಯನ್ನು ನಿಟ್ಟೆಯ ವೈದ್ಯಕೀಯ ಕಾಲೇಜಿನಲ್ಲಿ ಇಂದು ಪ್ರದಾನ ಮಾಡಲಾಯಿತು.
ಅನಾರೋಗ್ಯದ ನಿಮಿತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೊ. ಅಮೃತ ಸೋಮೇಶ್ವರ ಅವರಿಗೆ ಆಸ್ಪತ್ರೆಯ ಸಭಾಂಗಣದಲ್ಲೇ ಇಂದು ಅತಿಥಿಗಳ ಸಮ್ಮುಖದಲ್ಲಿ ಈ ಪ್ರತಿಷ್ಠಿತ ಸಮ್ಮಾನ್ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಕೇಂದ್ರ ಸಾಹಿತ್ಯ ಅಕಾಡಮಿಯ ಉಪಾಧ್ಯಕ್ಷ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ತಮ್ಮ ಹಾಗೂ ಪ್ರೊ. ಅಮೃತ ಸೋಮೇಶ್ವರ ಅವರ ಸ್ನೇಹವನ್ನು ನೆನಪಿಸಿಕೊಂಡರು. ಪ್ರೊ. ಅಮೃತಸೋಮೇಶ್ವರವರ ಆರೋಗ್ಯ ಆದಷ್ಟು ಬೇಗ ಸುಧಾರಿಸಿ ಗುಣಮುಖರಾಗಲಿ ಎಂದು ಹಾರೈಸಿದರು.
ಸಂಸ್ಥೆಯ ಆಡಳಿತ ನಿರ್ದೇಶಕ ವಿನಯ್ ಹೆಗ್ಡೆ, ಖ್ಯಾತ ಎಲುಬು ತಜ್ಞ ಡಾ. ಶಾಂತಾರಾಮ ಶೆಟ್ಟಿ, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ರಮಾನಂದ ಶೆಟ್ಟಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಾರ್ಯದರ್ಶಿ ಎಸ್.ಪಿ. ಮಹಾಲಿಂಗೇಶ್ವರ್ ಈ ಸಂದರ್ಭ ಉಪಸ್ಥಿತಿರದ್ದರು.
ಕೇಂದ್ರ ಸಾಹಿತ್ಯ ಅಕಾಡಮಿಯ ಸದಸ್ಯರಾದ ನಾ. ದಾಮೋದರ ಶೆಟ್ಟಿ ಸ್ವಾಗತಿಸಿದರು.





