ಬಿಬಿನ್ ಕೊಲೆ: ಮುಖ್ಯ ಆರೋಪಿಯ ಪತ್ನಿಯ ಬಂಧನ

ತಿರೂರ್,ಸೆ.14: ಆರೆಸ್ಸೆಸ್ ತೃಪ್ಪಂಗಾಡ್ ಮಂಡಲದ ಶಾರೀರಿಕ ಶಿಕ್ಷಕ್ ಪ್ರಮುಖ್ ಮತ್ತು ಕೊಡಿಂಞಿ ಫೈಝಲ್ ಕೊಲೆ ಪ್ರಕರಣದ ಎರಡನೆ ಆರೋಪಿಯಾಗಿದ್ದ ಆಲತ್ತೂರ್ ಬಿಬಿನ್(24) ಹತ್ಯೆ ಪ್ರಕರಣದ ಪ್ರಥಮ ಆರೋಪಿ ಲತೀಫ್ ಎಂಬಾತನ ಪತ್ನಿ ಶಾಹಿದಾ(32) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಕುರಿತು ಮಾಹಿತಿ ಇದ್ದರೂ ಮುಚ್ಚಿಟ್ಟಿದ್ದರು ಎನ್ನುವ ಆರೋಪವನ್ನು ಶಾಹಿದಾರ ವಿರುದ್ಧ ಹೊರಿಸಲಾಗಿದೆ.
ನಿನ್ನೆ ವಿಚಾರಣೆಗೆಂದು ಕಸ್ಟಡಿಗೆ ಪಡೆದಿದ್ದ ಶಾಹಿದಾಳನ್ನು ನಂತರ ಪೊಲೀಸರು ಬಂಧಿಸಿದ್ದಾರೆ. ಪತಿ ಲತೀಫ್‍ರ ನೇತೃತ್ವದಲ್ಲಿ ಎಡಪ್ಪಾಲದ ಮನೆಯಲ್ಲಿ ಹಲವು ಬಾರಿ ಸಂಚು ನಡೆದಿತ್ತು ಎಂದು ಪೊಲೀಸರು ಕಂಡುಹಿಡಿದಿದ್ದಾರೆ. ಕೊಲೆಯಾಗುವ ಮೊದಲು ಬಿಪಿನ್‍ನ ಕೊಲೆಗೆ ಮೂರು ಸಲ ಪ್ರಯತ್ನ ನಡೆಸಿದ್ದ ತಂಡ ಇವರ ಎಡಪ್ಪಾಲದ ಮನೆಯಲ್ಲಿ ಉಳಿದುಕೊಂಡಿದೆ ಎಂದು ಪೊಲೀಸರು ಹೇಳುತ್ತಾರೆ.
‘ಲತೀಫ್ ಎಲ್ಲಿದ್ದಾನೆ’ ಎಂದು ಹೇಳಿದರೆ ಬಿಡುತ್ತೇವೆ ಎಂದು ಹೇಳಿ ಕಸ್ಟಡಿಗೆ ಪಡೆದ ಮಹಿಳೆಯನ್ನು ಇಡೀ ರಾತ್ರಿ ಡಿವೈಎಸ್ಪಿ ಕಚೇರಿಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಎಸ್‍ಡಿಪಿಐ ನಾಯಕರು ಆರೋಪಿಸಿದ್ದಾರೆ.
ಪ್ರಕರಣದಲ್ಲಿಈವರೆಗೆ ಐದು ಮಂದಿಯನ್ನು ಬಂಧಿಸಲಾಗಿದೆ. ಮೂವರ ವಿರುದ್ಧ ಸಂಚು ಹೆಣೆದ ಆರೋಪ ಹೊರಿಸಲಾಗಿದೆ. ಒಬ್ಬ ಕೃತ್ಯದಲ್ಲಿ ಪಾಲ್ಗೊಂಡಿದ್ದಾನೆ ಎಂದು ಪೊಲೀಸರು ತೀಳಿಸಿದ್ದಾರೆ.
ಬಿಬಿನ್ ಕೊಲೆ ಪ್ರಕರಣದ ಮುಖ್ಯ ಆರೋಪಿ ಲತೀಫ್ ಈವರೆಗೂ ಪೊಲೀಸರಿಗೆ ಸಿಕ್ಕಿಬಿದ್ದಿಲ್ಲ.







