ಮಡಿಕೇರಿ: ಸೆ.16 ರಂದು ಎಸ್ಕೆಎಸೆಸ್ಸೆಫ್ ವಾರ್ಷಿಕೋತ್ಸವ

ಮಡಿಕೇರಿ, ಸೆ.14: ಎಸ್ಕೆಎಸೆಸ್ಸೆಫ್ ಪೊನ್ನಂಪೇಟೆ ಶಾಖೆಯ 5ನೆ ವಾರ್ಷಿಕೋತ್ಸವ ಮತ್ತು ಬಡ ಹೆಣ್ಣು ಮಗಳ ವಿವಾಹ ಸಮಾರಂಭ ಸೆಪ್ಟೆಂಬರ್ 16 ರಂದು ಪೊನ್ನಂಪೇಟೆ ಶಾಫಿ ಜುಮಾ ಮಸೀದಿಯ ಆವರಣದ ಶಂಸುಲ್ ಉಲಮಾ ನಗರದಲ್ಲಿ ನಡೆಯಲಿದೆ ಎಂದು ಎಸ್ಕೆಎಸೆಸ್ಸೆಫ್ ಕಾರ್ಯದರ್ಶಿ ಸಿ.ಎ.ಸಾಜಿರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬ ಬಡ ಹೆಣ್ಣು ಮಗಳ ವಿವಾಹ, ಏಕದಿನ ಮತ ಪ್ರಭಾಷಣ ಕಾರ್ಯಕ್ರಮ ಹಾಗೂ ಸಮ್ಮೇಳನವನ್ನು ಆಯೋಜಿಸಲಾಗಿದೆ. ಹಿರಿಯರಾದ ಅಹ್ಮದ್ ಹಾಜಿ ಅವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, 5.30ಕ್ಕೆ ವಿವಾಹ ಸಮಾರಂಭ ನಡೆಯಲಿದೆ. ಪಾಣಕ್ಕಾಡ್ ಸಯ್ಯಿದ್ ಸಾಬಿಕ್ ಅಲಿ ಶಿಹಾಬ್ ತಂಙಳ್ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದು, ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಕೊಡಗಿನ ಖಾಝೀ ಎಂ.ಅಬ್ದುಲ್ಲಾ ಫೈಝಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಭಾಷಣಕಾರ ಉಸ್ತಾದ್ ಅಲ್ ಹಾಫಿಳ್ ಸಿರಾಜದ್ದೀನ್ ಖಾಸಿಮಿ ಅವರು ‘ದುಶ್ಚಟ ಪೀಡಿತ ಮಕ್ಕಳು ಮತ್ತು ದುಃಖಿತ ತಂದೆ ತಾಯಿ’ ವಿಷಯದ ಕುರಿತು ಮುಖ್ಯ ಭಾಷಣ ಮಾಡಲಿದ್ದು, ಎಸ್ಕೆ ಜೆಎಂಸಿಸಿ ಕಾರ್ಯದರ್ಶಿ ಎಂ. ಅಬ್ದುಲ್ ರೆಹೆಮಾನ್ ಮುಸ್ಲಿಯಾರ್, ಎಸ್ಕೆಎಸೆಸ್ಸೆಫ್ ಕೇಂದ್ರ ಕಾರ್ಯದರ್ಶಿ ಪಿ.ಎಂ. ಆರಿಫ್ ಫೈಝಿ, ಎಸ್ಕೆಎಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಎಂ. ತಮ್ಲಿಖ್ ದಾರಿಮಿ, ಎಸ್ ವೈಎಸ್ ಪೊನ್ನಂಪೇಟೆ ಕಾರ್ಯದರ್ಶಿ ಕೆ.ಎಂ. ಅಬು ಮತ್ತಿತರ ಪ್ರಮುಖರು ಸಮ್ಮೇಳನದಲ್ಲಿ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಖತೀಬರಾದ ಫೈಜಲ್ ಫೈಝಿ, ಎಸ್‍ಕೆಎಸ್‍ಎಸ್‍ಎಫ್ ಪೊನ್ನಂಪೇಟೆ ಅಧ್ಯಕ್ಷರಾದ ಎಂ.ಎ. ರಹೀಂ, ಕಾರ್ಯದರ್ಶಿ ಕೆ.ಎಂ. ಅಬು, ಉಪಾಧ್ಯಕ್ಷರಾದ ಶಿಹಾಬುದ್ದೀನ್ ಹಾಗೂ ಸಂಚಾಲಕರಾದ ಶೌಕತ್ ಅಲಿ ಉಪಸ್ಥಿತರಿದ್ದರು.







