ಮ್ಯಾನ್ಮಾರ್ ಅಶಾಂತಿ ಶಮನಕ್ಕೆ ಭಾರತ ಮಧ್ಯ ಪ್ರವೇಶಿಸಲಿ: ಎಸ್‍ವೈಎಸ್ ಒತ್ತಾಯ

ಮಡಿಕೇರಿ, ಸೆ.14: ಮ್ಯಾನ್ಮಾರ್‍ನಲ್ಲಿ ಸೃಷ್ಟಿಯಾಗಿರುವ ಅಶಾಂತಿಯ ವಾತಾವರಣವನ್ನು ಶಮನ ಮಾಡಲು ಭಾರತ ದೇಶ ಮಧ್ಯ ಪ್ರವೇಶ ಮಾಡಬೇಕು ಮತ್ತು ಶಾಂತಿ ನೆಲೆಸುವವರೆಗೆ ರೋಹಿಂಗ್ಯ ನಿರಾಶ್ರಿತರನ್ನು ಭಾರತದಿಂದ ಗಡಿಪಾರು ಮಾಡಬಾರದೆಂದು ಎಸ್‍ವೈಎಸ್ ಸಂಘಟನೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮಾಧ್ಯಮ ಸಂಚಾಲಕ ಸಿ.ಎಂ.ಹಮೀದ್ ಮೌಲವಿ, ಮಾನವೀಯ ನೆಲೆಯಲ್ಲಿ ಭಾರತ ರೊಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನೀಡಬೇಕು. ನೆರೆ ರಾಷ್ಟ್ರ ಮ್ಯಾನ್ಮಾರ್‍ನಲ್ಲಿ ಭಯಾನಕ ಹತ್ಯಾಕಾಂಡಗಳು ನಡೆಯುತ್ತಿದ್ದು, 10 ಲಕ್ಷಕ್ಕೂ ಅಧಿಕ ಮಂದಿ ಅಕ್ಕಪಕ್ಕದ ರಾಷ್ಟ್ರಗಳಿಗೆ ವಲಸೆ ಹೋಗಿದ್ದಾರೆ. ಭಾರತ ದೇಶಕ್ಕೂ ಸುಮಾರು 40 ಸಾವಿರ ಮಂದಿ ಆಗಮಿಸಿದ್ದು, ಅಸಹಾಯಕ ಸ್ಥಿತಿಯಲ್ಲಿರುವ ಇವರನ್ನು ಯಾವುದೇ ಕಾರಣಕ್ಕು ಗಡಿಪಾರು ಮಾಡಬಾರದೆಂದು ಒತ್ತಾಯಿಸಿದರು.
ಈ ದೌರ್ಜನ್ಯದ ವಿರುದ್ಧ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನೆರೆ ರಾಷ್ಟ್ರವಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮ್ಯಾನ್ಮಾರ್‍ನ ನಾಯಕಿ ಆಂಗ್ ಸಾನ್ ಸೂಕಿ ಅವರೊಂದಿಗೆ ಚರ್ಚಿಸಿ ಬಿಕ್ಕಟ್ಟು ಶಮನಕ್ಕೆ ಮುಂದಾಗಬೇಕೆಂದು ತಿಳಿಸಿದರು.
ಶ್ರೀಲಂಕ, ಟಿಬೆಟ್ ಸೇರಿದಂತೆ ನೆರೆಯ ರಾಷ್ಟ್ರಗಳಿಂದ ಬಂದಿರುವ ನಿರಾಶ್ರಿತರಿಗೆ ಆಶ್ರಯ ನೀಡಿರುವ ಭಾರತ ಅದಕ್ಕಿಂತಲೂ ಹೆಚ್ಚಿನ ಸಂಕಷ್ಟ ಮತ್ತು ನೋವನ್ನು ಅನುಭವಿಸುತ್ತಿರುವ ರೊಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ಮತ್ತು ಅಭಯ ಹಸ್ತವನ್ನು ನೀಡಬೇಕೆಂದು ಮನವಿ ಮಾಡಿದರು.
ಖಂಡನೆ: ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಎಸ್‍ವೈಎಸ್ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ತಲೆ ತಗ್ಗಿಸುವಂತಹ ಕೃತ್ಯ ಇದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಮಾನತೆಗಾಗಿ ಮತ್ತು ವಾಕ್ ಸ್ವಾತಂತ್ರ್ಯಕ್ಕಾಗಿ ಹೋರಾಟಗಳನ್ನು ರೂಪಿಸಿದ್ದ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೆಟ್ಟ ಹೆಸರನ್ನು ತರುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿದರು.
ವಿಚಾರಗಳ ಭಿನ್ನತೆಯನ್ನು ವೈಚಾರಿಕವಾಗಿ ಎದುರಿಸಬೇಕೆ ಹೊರತು ಬಂದೂಕಿನಿಂದ ಅಲ್ಲ. ದುಷ್ಕೃತ್ಯವೆಸಗಿದವರು ಯಾರೇ ಆಗಿರಲಿ ಅವರನ್ನು ಶೀಘ್ರ ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಸಿ.ಎಂ.ಹಮೀದ್ ಮೌಲವಿ ಆಗ್ರಹಿಸಿದರು.
ಹೊಸತೋಟ ಮಸೀದಿ ಹಾಗೂ ಕಕ್ಕಬ್ಬೆ ಶ್ರೀ ಭಗವತಿ ದೇವಾಲಯವನ್ನು ಅಪವಿತ್ರಗೊಳಿಸಿರುವ ಕೃತ್ಯಗಳನ್ನು ಸಂಘಟನೆ ಕಟುವಾಗಿ ಖಂಡಿಸುತ್ತದೆ. ಆದರೆ, ಈ ರೀತಿಯ ಘಟನೆಗಳು ನಡೆದಾಗ ಒಂದು ಸಮುದಾಯವನ್ನು ಗುರಿ ಮಾಡುವುದು ಸರಿಯಾದ ಕ್ರಮವಲ್ಲವೆಂದರು. ಎಸ್‍ವೈಎಸ್ ಸಂಘಟನೆಯಲ್ಲಿ ಸುಮಾರು 2 ಸಾವಿರ ಮಂದಿ ಸದಸ್ಯರುಗಳಿದ್ದು, ಯಾರ ವಿರುದ್ಧವೂ ಯಾವುದೇ ದೂರುಗಳಿಲ್ಲ. ಸಂಘಟನೆ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯನ್ನಷ್ಟೆ ಬಯಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಉಮ್ಮರ್ ಫೈಝಿ, ಪ್ರಮುಖರಾದ ಎ.ಸಿ. ಉಸ್ಮಾನ್ ಫೈಝಿ, ಕಾರ್ಯನಿರ್ವಾಹಕ ಕಾರ್ಯದರ್ಶಿ ಎನ್.ಎನ್. ಇಕ್ಬಾಲ್, ಮೊಹಮ್ಮದಾಲಿ ಹಾಗೂ ಫೈಝಲ್ ಫೈಝಿ ಉಪಸ್ಥಿತರಿದ್ದರು.







