ಮಡಿಕೇರಿ: ಸೆ.23ರಿಂದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ

ಮಡಿಕೇರಿ, ಸೆ.14: ಮಡಿಕೇರಿ ನಗರ ದಸರಾ ಸಮಿತಿ ಮತ್ತು ದಸರಾ ಕ್ರೀಡಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಸೆಪ್ಟೆಂಬರ್ 23, 24 ಹಾಗೂ 26 ರಂದು ನಡೆಯಲಿದೆ ಎಂದು ಕ್ರೀಡಾ ಸಮಿತಿಯ ಅಧ್ಯಕ್ಷ ಬಿ.ಕೆ.ಜಗದೀಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.23 ರಂದು ಬೆಳಗ್ಗೆ 6.30ಕ್ಕೆ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಮೆರಥಾನ್ ಸ್ಪರ್ಧೆ ಆರಂಭಗೊಳ್ಳಲಿದೆ. ಪುರುಷರಿಗಾಗಿ ಕ್ಯಾಪಿಟಲ್ ವಿಲೇಜ್‍ವರೆಗೆ ತೆರಳಿ ಮರಳುವ 10 ಕಿ.ಮೀ. ಸ್ಪರ್ಧೆ ಹಾಗೂ ಮಹಿಳೆಯರಿಗೆ ನೀರುಕೊಲ್ಲಿಯವರೆಗೆ ತೆರಳಿ ತಿಮ್ಮಯ್ಯ ವೃತ್ತಕ್ಕೆ ಮರಳುವ 5 ಕಿ.ಮೀ. ಸ್ಪರ್ಧೆ ನಡೆಯಲಿದೆ. 1 ರಿಂದ 3ನೆ ತರಗತಿ ಬಾಲಕ ಬಾಲಕಿಯರಿಗಾಗಿ 1 ಕಿ.ಮೀ., 4ರಿಂದ 5ನೇ ತರಗತಿಗೆ 1.5 ಕಿ.ಮೀ., 6ರಿಂದ 7ನೇ ತರಗತಿ 2 ಕಿ.ಮೀ., 8 ರಿಂದ 10ನೇ ತರಗತಿ 5 ಕಿ.ಮೀ. ಕ್ರಮಿಸುವ ಮೆರಥಾನ್ ನಡೆಯಲಿದೆ. ಮೆರಥಾನ್ ಸ್ಪರ್ಧೆಗೆ ಡಿವೈಎಸ್‍ಪಿ ಸುಂದರರಾಜ್ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಸೆ.24 ರಂದು ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಬೆಳಗ್ಗೆ 10ಕ್ಕೆ ವಿವಿಧ ಆಟೋಟ ಸ್ಪರ್ಧೆಗಳನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಲಿದ್ದು, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ ಕ್ರೀಡಾ ಜ್ಯೋತಿಯನ್ನು ಬರಮಾಡಿಕೊಳ್ಳಲಿದ್ದಾರೆ. 6 ವರ್ಷದ ಒಳಗಿನ ಮಕ್ಕಳಿಗೆ ಕಾಳು ಹೆಕ್ಕುವುದು ಮತ್ತು ಕಪ್ಪೆ ಜಿಗಿತ, 1 ರಿಂದ 3ನೆ ತರಗತಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 50 ಮೀ., 75 ಮೀ. ಓಟ, 4ರಿಂದ 5ನೇ ತರಗತಿ 50 ಮೀ., 75 ಮೀ., 6 ರಿಂದ 7ನೇ ತರಗತಿ 100 ಮೀ., 200 ಮೀ. ಓಟ, 8ರಿಂದ 10ನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 100 ಮೀ., 400 ಮೀ. ಓಟದ ಸ್ಪರ್ಧೆ ನಡೆಯಲಿದೆ ಎಂದರು.
ಸ್ಪರ್ಧೆಯಲ್ಲಿ 10ನೆ ತರಗತಿಯೊಳಗಿನ ವಿದ್ಯಾರ್ಥಿಗಳಿಗೆ ನಿಧಾನ ಗತಿಯ ಸೈಕಲ್ ಸ್ಪರ್ಧೆ, ಸಾಮಾನ್ಯ ವಿಭಾಗದಲ್ಲಿ ಪುರುಷರು ಮತ್ತು ಮಹಿಳೆಯರಿಗೆ 100 ಮೀ., 400 ಮೀ. ಓಟದ ಸ್ಪರ್ಧೆ ಹಾಗೂ ಭಾರದ ಗುಂಡು ಎಸೆತ ಸ್ಪರ್ಧೆ ನಡೆಯಲಿದೆ. ಮಹಿಳೆಯರಿಗೆ ಮುಕ್ತ ಥ್ರೋಬಾಲ್ ಮತ್ತು ಪುರುಷರಿಗೆ ಮುಕ್ತ ವಾಲಿಬಾಲ್ ಪಂದ್ಯಾವಳಿ ನಡೆಯಲಿದ್ದು, ಸ್ಥಳದಲ್ಲಿಯೇ ತಂಡಗಳನ್ನು ನೋಂದಾವಣಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ವಿಶೇಷ ಸ್ಪರ್ಧೆಗಳು: ಇದೇ ಮೊದಲ ಬಾರಿಗೆ ಈಜು ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದ್ದು, ಪುರುಷರು ಮತ್ತು ಮಹಿಳೆಯರಿಗಾಗಿ ಫ್ರೀ ಸ್ಟ್ರೋಕ್, ಬ್ಯಾಕ್ ಸ್ಟ್ರೋಕ್ 50 ಮೀ. ಮತ್ತು 100 ಮೀ. ಈಜು ಸ್ಪರ್ಧೆ ನಡೆಯಲಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 50 ಮೀ. ಈಜು ಸ್ಪರ್ಧೆ ನಡೆಯಲಿದೆ. ಹಿರಿಯ ನಾಗರಿಕರಿಗೆ 100 ಮೀ. ನಡಿಗೆ, . ಸಾಮಾನ್ಯ ವಿಭಾಗದಲ್ಲಿ ನಿಧಾನ ಮೋಟಾರ್ ಸೈಕಲ್ ರೇಸ್, ಪತ್ರಕರ್ತರಿಗೆ 100 ಮೀ. ಓಟ, ಭಾರದ ಗುಂಡು ಎಸೆತ, ಟೇಬಲ್ ಟೆನ್ನಿಸ್, ಚೆಸ್ ಕೇರಂ ಸ್ಪರ್ಧೆಗಳು ನಡೆಯಲಿವೆ ಎಂದರು.
ನಗರಸಭಾ ಸದಸ್ಯರಿಗೆ ಹಾಗೂ ದಸರಾ ಸಮಿತಿ ಸದಸ್ಯರಿಗೆ 100 ಮೀ. ಓಟ, ಭಾರದ ಗುಂಡು ಎಸೆತ ಸ್ಪರ್ಧೆಗಳು ನಡೆಯಲಿದೆ. ನಗರಸಭಾ ನೌಕರರಿಗೆ 100 ಮೀ. ಓಟ ಮತ್ತು ಭಾರದ ಗುಂಡು ಎಸೆತ, ಸಾಮಾನ್ಯ ವಿಭಾಗದಲ್ಲಿ ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಹಗ್ಗಜಗ್ಗಾಟ, ಸಾರ್ವಜಿಕ ಮಹಿಳೆಯರಿಗೆ ಬಾಂಬ್ ಇನ್ ದಿ ಸಿಟಿ ಸ್ಪರ್ಧೆಗಳು ನಡೆಯಲಿವೆ. ಆಸಕ್ತ ಸ್ಪರ್ಧಿಗಳು ಜಿಲ್ಲಾ ಕ್ರಿಡಾಂಗಣದಲ್ಲಿ ಬೆಳಗ್ಗೆ 10 ಗಂಟೆಯ ಒಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದ ಅವರು, ಉದ್ಘಾಟನಾ ಸಮಾರಂಭದಲ್ಲಿ ಅಂತರಾಷ್ಟ್ರೀಯ ಓಟಗಾರ ಕೊಡಗಿನ ತಿಲಕ್ ಅವರನ್ನು ಸನ್ಮಾನಿಸಲಾಗುವುದೆಂದು ಅವರು ಇದೇ ಸಂದರ್ಭ ತಿಳಿಸಿದರು.
ತೆಂಗಿನ ಕಾಯಿಗೆ ಗುಂಡು: ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಕುರಿತು ಸಮಿತಿಯ ಪದಾಧಿಕಾರಿ ಪೊನ್ನಚ್ಚನ ಮಧು ಮಾಹಿತಿ ನೀಡಿದರು. ಸೆ.24 ರಂದು ಬೆಳಗ್ಗೆ 1130ಕ್ಕೆ ನಗರದ ಶ್ರೀ ರಾಜೇಶ್ವರಿ ಶಾಲಾ ಮೈದಾನದಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧಾಳುಗಳು .22 ಬಂದೂಕು ಮತ್ತು ಮದ್ದುಗುಂಡುಗಳನ್ನು ತರಬೇಕೆಂದು ಹೇಳಿದರು.
ಕಬಡ್ಡಿ ಆಕರ್ಷಣೆ: ಸೆ.26 ರಂದು ನಗರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ತಂಡದಲ್ಲಿ ಮೂರು ಜನ ಅತಿಥಿ ಆಟಗಾರರಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಕಪಿಲ್ ತಿಳಿಸಿದರು.
ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರ ಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ಹೇಳಿದರು. ಸೆ.25 ರ ಸಂಜೆ 5 ಗಂಟೆಯ ಒಳಗೆ ಆಸಕ್ತ ತಂಡಗಳು ಪ್ರವೇಶ ಶುಲ್ಕ 700 ರೂ,ಗಳೊಂದಿಗೆ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9448206688, 9731009841, 9945258604 ನ್ನು ಸಂಪರ್ಕಿಸಬಹುದಾಗಿದೆ. ಕಳೆದ ವರ್ಷ 25 ತಂಡಗಳು ಪಾಲ್ಗೊಂಡಿದ್ದು, ಈ ಬಾರಿ ಇನ್ನೂ ಹೆಚ್ಚಿನ ತಂಡಗಳನ್ನು ನಿರೀಕ್ಷಿಸಲಾಗಿದೆ ಎಂದು ಕಪಿಲ್ ತಿಳಿಸಿದರು.
ವಿಜೇತ ಕಬಡ್ಡಿ ತಂಡಗಳಿಗೆ ಪ್ರಥಮ ಬಹುಮಾನ 12 ಸಾವಿರ, ದ್ವಿತೀಯ 8 ಸಾವಿರ, ತೃತೀಯ 3 ಸಾವಿರ, ನಾಲ್ಕನೇ ಬಹುಮಾನ 2 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದೆಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಪಿ.ಎಂ.ಹರಿಶ್, ದೀಪಕ್ ಕಣ್ಣನ್ ಹಾಗೂ ಕಾರ್ಯದರ್ಶಿ ಕೆ.ಎಸ್.ರಾಕೇಶ್ ಉಪಸ್ಥಿತರಿದ್ದರು.







