ಕ್ರೈಸ್ತರ ಅಭಿವೃದ್ಧಿ ಸಮಿತಿ ವಜಾಗೊಳಿಸಲು ಕರ್ನಾಟಕ ಕ್ರೈಸ್ತರ ವೇದಿಕೆ ಆಗ್ರಹ
ಬೆಂಗಳೂರು, ಸೆ.14: ಕ್ರೈಸ್ತರ ಅಭಿವೃದ್ಧಿಗೆ ರಾಜ್ಯ ಸರಕಾರ ರಚಿಸಿರುವ ಕರ್ನಾಟಕ ಕ್ರೈಸ್ತರ ಅಭಿವೃದ್ಧಿ ಸಮಿತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದ್ದು, ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಹೀಗಾಗಿ, ಸಮಿತಿ ಅಧ್ಯಕ್ಷರಾಗಿರುವ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಉಪಾಧ್ಯಕ್ಷರಿಬ್ಬರೂ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ಕ್ರೈಸ್ತರ ವೇದಿಕೆ ರಾಜ್ಯಾಧ್ಯಕ್ಷ ಭಾಸ್ಕರ್ ಬಾಬು ಪಾತರಪಲ್ಲಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಕಾಂಗ್ರೆಸ್ ಸರಕಾರ ಕೆಲವರನ್ನು ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದೆ. ಆದರೆ, ಅವರು ಯಾವುದೇ ಪರಿಣಿತಿ ಹೊಂದಿಲ್ಲ. ಅಲ್ಲದೆ, ಜಿಲ್ಲಾವಾರು ಯಾವ ಪ್ರತಿನಿಧಿಯನ್ನೂ ನೇಮಿಸಿಲ್ಲ. ಸಮಿತಿ ಸದಸ್ಯರ ನೇಮಕಕ್ಕೆ ಯಾವುದೇ ಮಾನದಂಡ ಅಳವಡಿಸಿಲ್ಲ. ಆದುದರಿಂದ ಈ ಸಮಿತಿಯನ್ನು ರದ್ದುಗೊಳಿಸಬೇಕು. ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಜಾರ್ಜ್ ಹಾಗೂ ಉಪಾಧ್ಯಕ್ಷರಾದ ಐವನ್ ಡಿಸೋಜಾ, ಜೆ.ಆರ್.ಲೋಬೋ ಅವರಿಂದ ಸರಕಾರ ರಾಜೀನಾಮೆ ಪಡೆಯಬೇಕು. ಅನಗತ್ಯವಾಗಿ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡಿರುವುದಲ್ಲದೆ ನಕಲಿ ದಾಖಲೆ ಸೃಷ್ಟಿಸಿ ಸರಕಾರಕ್ಕೆ ವಂಚನೆ ಮಾಡಲಾಗಿದೆ. ಹೀಗಾಗಿ, ಸಮಿತಿಯನ್ನೇ ಸಂಪೂರ್ಣ ರದ್ದು ಮಾಡಬೇಕು ಎಂದು ಮನವಿ ಮಾಡಿದರು.
ಕೆಲವರು ಸಮಿತಿ ಹೆಸರನ್ನು ದುರುಪಯೋಗ ಮಾಡಿಕೊಂಡು, ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದಾರೆ. ಹೀಗೆ ಸಾಕಷ್ಟು ಮಂದಿ ತಮಗೆ ಬೇಕಾದಂತೆ ಈ ಸಮಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆದುದರಿಂದ ಸರಕಾರ ಕೂಡಲೇ ಇತ್ತ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಪ್ರತ್ಯೇಕ ನಿಗಮ ರಚಿಸಬೇಕು ಹಾಗೂ ಅದಕ್ಕೆ ಕ್ರೈಸ್ತ ಧರ್ಮದ ಹಿರಿಯ ಅಧಿಕಾರಿಯನ್ನೇ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಉಪಾಧ್ಯಕ್ಷ ಪೃಥ್ವಿ ಪಾಲ್, ಕಾರ್ಯದರ್ಶಿ ಜೀವನ್ ಉಪಸ್ಥಿತರಿದ್ದರು.







