ನೇಕಾರರ ಸಾಲ ಮನ್ನಾ ಮಾಡುವಂತೆ ಆಗ್ರಹ
ಬೆಂಗಳೂರು, ಸೆ. 14: ರೈತರ ಸಾಲ ಮನ್ನಾ ಮಾಡಿದಂತೆ ನೇಕಾರರ ಸಾಲ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಮಹಾಸಭಾದ ರಾಜ್ಯಾಧ್ಯಕ್ಷ ಬಿ.ಎಸ್.ಸೋಮಶೇಖರ್ ಅವರು ಆಗ್ರಹಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 8600 ಕೋಟಿ ರೂ. ಇರುವ ರೈತರ ಸಾಲ ಮನ್ನಾ ಮಾಡಿರುವ ಸರಕಾರ ನೇಕಾರರ ಸಾಲ 60 ಕೋಟಿ ರೂ. ಮನ್ನಾ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ. ರೈತರು ಹಾಗೂ ನೇಕಾರರು ಎರಡು ಕಣ್ಣುಗಳಿದ್ದಂತೆ ಎಂಬ ಹೇಳಿಕೆ ಕೇವಲ ಹೇಳಿಕೆಗೆ ಮಾತ್ರ ಸೀಮಿತವಾಗಿದೆ. ರೈತರಿಗೆ ಸಿಗುತ್ತಿರುವ ಸೌಲಭ್ಯ, ಗೌರವ ನೇಕಾರರಿಗೆ ಸರಿಯಾಗಿ ಸಿಗುತ್ತಿಲ್ಲ ಎಂದು ಅವರು ಆರೋಪಿಸಿದರು.
ಸಾಲ ಮನ್ನಾ ಮಾಡುವ ಮೂಲಕ ನೇಕಾರರ ಸಂಕಷ್ಟಕ್ಕೆ ಪರಿಹಾರ ನೀಡಬೇಕು. ಸಾಲ ಮನ್ನಾಗೆ ಕೋರಿ ಕೆಲ ತಿಂಗಳುಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲಾಗಿದೆ. ಹಲವು ಬಾರಿ ಪ್ರತಿಭಟನೆ ಮಾಡಲಾಗಿದೆ.ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದುದರಿಂದ ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನೇಕಾರರ ಸಾಲ ಮನ್ನಾ ಮಾಡುವುದರೊಂದಿಗೆ ನೇಕಾರರನ್ನು ಸಂಘಟಿತ ಕಾರ್ಮಿಕರೆಂದು ಘೋಷಿಸಬೇಕು. ಅವರಿಗೆ ನೀಡುವ ಆರೋಗ್ಯ ವಿಮೆ ಸ್ಥಗಿತಗೊಂಡಿದ್ದು, ಅದನ್ನು ಸರಿಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು. ಮಹಾಸಭಾ ಎಲ್ಲಾ ತಾಲೂಕುಗಳಲ್ಲಿ ಘಟಕ ಪ್ರಾರಂಭಿಸಿ ನೇಕಾರರನ್ನು ಸಂಘಟಿಸಲು ಸಹಕರಿಸಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಸಿಗುವ ಪ್ರಾಮುಖ್ಯತೆ ನೇಕಾರರಿಗೆ ಸಿಗುತ್ತಿಲ್ಲ. ನೇಕಾರಿಕೆಯನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಲಕ್ಷಾಂತರ ಮಂದಿ ದುಡಿಯುವ ಬಂಡವಾಳ, ಆರೋಗ್ಯ ವಿಮೆ, ಸಮರ್ಪಕ ಮಾರುಕಟ್ಟೆ ಸೌಲಭ್ಯ ಸೇರಿದಂತೆ ಹಲವು ಸಮಸ್ಯೆಗಳಿಂದ ನರಳುತ್ತಿದ್ದಾರೆ. ನೇಯ್ದ ಸೀರಿಗೆ ಯೋಗ್ಯ ಬೆಲೆ ಸಿಗದೆ ಕಂಗಾಲಾಗಿದ್ದು, ಮಾಡಿರುವ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹೀಗಾಗಿ, ಸಾಲ ಮನ್ನಾಗೆ ಕ್ರಮಕೈಗೊಳ್ಳಬೇಕು ಎಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ನವೀನ್ ಚಿಲ್ಲಾಳ್, ಉಪಾಧ್ಯಕ್ಷ ಎ.ವಿಜಯ್ ಕುಮಾರ್, ಜಂಟಿ ಕಾರ್ಯದರ್ಶಿ ತೋಟಪ್ಪ ಶೇಖಾ, ಕಾರ್ಯದರ್ಶಿ ಆರ್.ರಾಘವೇಂದ್ರ, ಖಜಾಂಚಿ ಎನ್.ಕೃಷ್ಣಪ್ಪ ಉಪಸ್ಥಿತರಿದ್ದರು.







