6ನೆ ವೇತನ ಆಯೋಗದ ಜಾರಿ ವಿಳಂಬ: ಮಧ್ಯಂತರ ಪರಿಹಾರ ನೀಡಲು ಕರ್ನಾಟಕ ನೌಕರರ ಸಂಘ ಆಗ್ರಹ
ಬೆಂಗಳೂರು, ಸೆ. 14: 6ನೆ ವೇತನ ಆಯೋಗದ ಜಾರಿ ವಿಳಂಬದಿಂದ ರಾಜ್ಯ ನೌಕರರಿಗೆ ಆದ ಅನ್ಯಾಯವನ್ನು ಸರಿದೂಗಿಸಲು ಶೇ.30ರಷ್ಟು ಮಧ್ಯಂತರ ಪರಿಹಾರ ನೀಡಲು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಬೇಕೆಂದು ಕರ್ನಾಟಕ ನೌಕರರ ಸಂಘ 6ನೆ ವೇತನ ಆಯೋಗದ ಅಧ್ಯಕ್ಷರನ್ನು ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ, ಆರಂಭದಲ್ಲಿ ಸರಕಾರ ನಾಲ್ಕು ತಿಂಗಳಲ್ಲಿ ವೇತನ ಆಯೋಗ ವರದಿ ನೀಡಬೇಕೆಂದು ಸೂಚಿಸಿತ್ತು. ಆದರೆ, ಇತ್ತೀಚೆಗೆ ವೇತನ ಆಯೋಗ ಮತ್ತೆ ನಾಲ್ಕು ತಿಂಗಳು ಸಮಯ ನೀಡುವಂತೆ ಕೋರಿದೆ ಮತ್ತು ಸರಕಾರ ಆಯೋಗದ ಅವಧಿಯನ್ನು ಈಗ ವಿಸ್ತರಿಸಿದೆ. ಇದರಿಂದಾಗಿ ನೌಕರರಿಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ. ಆದುದರಿಂದ 6ನೆ ವೇತನ ಆಯೋಗದ ಮುಖ್ಯಸ್ಥ ಶ್ರೀನಿವಾಸಮೂರ್ತಿ 2017ರ ಏ.1 ರಿಂದ ಅನ್ವಯವಾಗುವಂತೆ ಶೇ.30ರಷ್ಟು ಮಧ್ಯಂತರ ಪರಿಹಾರ ನೀಡಲು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿದರು.
ಸಂಘವು ಈ ಕುರಿತು 2017ರ ಜುಲೈನಲ್ಲಿ ಆಯೋಗಕ್ಕೆ ಮನವಿ ಸಲ್ಲಿಸಲಾಗಿತ್ತು. ಜೊತೆಗೆ, ಇತ್ತೀಚೆಗೆ ಮತ್ತೊಂದು ಬಾರಿ ಮನವಿ ಸಲ್ಲಿಸಲಾಗಿದೆ. ನೆರೆಹೊರೆಯ ರಾಜ್ಯಗಳ ನೌಕರರ ವೇತನದ ವ್ಯತ್ಯಾಸಗಳನ್ನು ಮಾತ್ರವಲ್ಲದೆ ರಾಜ್ಯ ಸರಕಾರದ ವಿವಿಧ ಇಲಾಖೆಗಳ ವೇತನ ರಚನೆಗೆ ಸಂಬಂಧಿಸಿದ ಅಂಶಗಳು, ಆಡಳಿತದ ದಕ್ಷತೆ ಹಾಗೂ ಪಾರದರ್ಶಕತೆಗೆ ಕೈಗೊಳ್ಳಬೇಕಾದ ಕ್ರಮಗಳು, ಸರಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಕುರಿತು ಕೂಡಾ ವೇತನ ಆಯೋಗಕ್ಕೆ ಸಲ್ಲಿಸಲಾದ ಪತ್ರದಲ್ಲಿ ದಾಖಲಿಸಲಾಗಿದೆ ಎಂದರು.







