ಲಂಬಾಣಿ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳಿ: ಡಾ.ಶಿವರಾಜ್ ಪಾಟೀಲ್
ರಾಯಚೂರು, ಸೆ.14: ಪ್ರತಿಯೊಬ್ಬ ಲಂಬಾಣಿ ಉದ್ಯೋಗಿಯು ತಮ್ಮ ಸಮುದಾಯದ ಒಬ್ಬ ವಿದ್ಯಾರ್ಥಿಯನ್ನು ದತ್ತು ತೆಗೆದುಕೊಂಡು ಅವರನ್ನು ಸುಶಿಕ್ಷಿತರನ್ನಾಗಿಸುವ ಮೂಲಕ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಜನಾಂಗದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ರಾಯಚೂರು ಶಾಸಕ ಡಾ.ಶಿವರಾಜ್‌ಪಾಟೀಲ್ ಕರೆ ನೀಡಿದ್ದಾರೆ.
ನಗರದ ಕೃಷಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ರಾಜ್ಯ ಬಂಜಾರ ನೌಕರರ ಸಾಂಸ್ಕೃತಿಕ ಮತ್ತು ಕ್ಷೇಮಾಭಿವೃದ್ಧಿ ಸಂಘವು 2016-17ನೆ ಶೈಕ್ಷಣಿಕ ಸಾಲಿನಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಅಂಕಗಳಿಸಿ ಉತ್ತೀರ್ಣರಾಗಿರುವ ಪ್ರತಿಭಾನ್ವಿತ ಬಂಜಾರ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪುರಸ್ಕಾರ ಮತ್ತು ನಾಗರಿಕ ಸೇವೆಗೆ ಆಯ್ಕೆಯಾದವರಿಗೆ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಂಜಾರ ಸಮುದಾಯ ಕಾಡುಮೇಡುಗಳಲ್ಲಿ ಬದುಕುತ್ತಾ ಬಂದಿದೆ. ಈಗಷ್ಟೇ ಮುಖ್ಯವಾಹಿನಿಗೆ ಬರುವ ರೀತಿ ಸಮುದಾಯದ ಪ್ರಗತಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಶಿವರಾಜ್‌ಪಾಟೀಲ್ ಮನವಿ ಮಾಡಿದರು.
ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿ ಹೀರಾನಾಯ್ಕಿ ಮಾತನಾಡಿ, ಉನ್ನತ ಹುದ್ದೆಗಳಲ್ಲಿ ಇರುವವರು ಸಮುದಾಯದ ಹಿತಕ್ಕಾಗಿ ಸಕ್ರಿಯವಾಗಬೇಕು. ಜನಾಂಗಕ್ಕಾಗಿ ಮಾಡುವ ಕೆಲಸ ಕೊಡುವ ತೃಪ್ತಿಯನ್ನು ಹಣ ಕೊಡುವುದಿಲ್ಲ. ನಮಗಾಗಿ ಕೆಲಸ ಮಾಡಿದರೆ ನಮ್ಮ ಅಧಿಕಾರ, ಹುದ್ದೆ ಇರುವವರೆಗೆ ಮಾತ್ರ ಮಾನ್ಯತೆ ಸಿಗುತ್ತದೆ. ಆದರೆ, ಜನರಿಗಾಗಿ ಕೆಲಸ ಮಾಡಿದರೆ, ಸಮಾಜದ ಗೌರವ ಎಂದೆಂದಿಗೂ ಚಿರಸ್ಥಾಯಿಯಾಗಿರುತ್ತದೆ ಎಂದರು.
ಈ ವೇಳೆ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.85ಕ್ಕೂ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳು, ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಂಟು ಮಂದಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಲಿಂಗಸುಗೂರಿನ ಮಹಾಂತ ಶಾಖಾ ಮಠದ ಸಿದ್ದಲಿಂಗದೇವರು ಸ್ವಾಮಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಸುಭಾಷ್ ರಾಥೋಡ್, ರಾಜ್ಯ ಬಂಜಾರ ನೌಕರರ ಸಾಂಸ್ಕೃತಿಕ ಮತ್ತು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಕುಮಾರನಾಯ್ಕಿ, ಗೌರವಾಧ್ಯಕ್ಷ ಭೋಜ್ಯಾನಾಯ್ಕ, ಪ್ರಧಾನ ಕಾರ್ಯದರ್ಶಿ ಹರೀಶ್‌ನಾಯ್ಕಿ, ಮಾಧ್ಯಮ ಕಾರ್ಯದರ್ಶಿ ರಮೇಶ್ ಚವ್ಹಾಣ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.







