ಐಟಿ ಅಧಿಕಾರಿ ಮಗನ ಅಪಹರಣ

ಬೆಂಗಳೂರು, ಸೆ.14: ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರ ಮಗನನ್ನು ಅಪಹರಿಸಿರುವ ದುಷ್ಕರ್ಮಿಗಳು 50 ಲಕ್ಷ ರೂ. ಬೇಡಿಕೆಯಿಟ್ಟಿರುವ ಆರೋಪ ಇಲ್ಲಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಆದಾಯ ತೆರಿಗೆ ಇಲಾಖೆಯ ಕಚೇರಿಯಲ್ಲಿ ಹಿರಿಯ ಅಧಿಕಾರಿ ನಿರಂಜನ್ ಎಂಬವರ ಮಗ ಶರತ್‌ನನ್ನು(19) ಅಪಹರಿಸಿರುವ ದುಷ್ಕರ್ಮಿಗಳು ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.
ಶರತ್ ಡಿಪ್ಲೊಮಾ ಪದವಿ ವ್ಯಾಸಂಗ ಮಾಡುತ್ತಿದ್ದು, ಎರಡು ದಿನಗಳ ಹಿಂದೆ ಕೆಂಗೇರಿಯ ಉಳ್ಳಾಲದ ಮನೆಯಿಂದ ಜ್ಞಾನಭಾರತಿಯ ಸ್ನೇಹಿತನ ಮನೆಗೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ಅಪಹರಿಸಿ, 50 ಲಕ್ಷ ರೂ. ನೀಡಿದರೆ ಆತನನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿರುವ ವೀಡಿಯೊ ಪೋಷಕರಿಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶರತ್ ಅವರ ತಾಯಿ, ಸಹೋದರಿಯ ವಾಟ್ಸಾಪ್‌ಗೆ ಅಪಹರಣಕಾರರು ವೀಡಿಯೊ ಕಳುಹಿಸಿ, ಹಣದ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಜ್ಞಾನಭಾರತಿ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story





