ಸಿದ್ದಗಂಗಾ ಶ್ರೀಗಳ ಹೇಳಿಕೆ ವಿಚಾರದಲ್ಲಿ ಸಂಘ ಪರಿವಾರದ ಷಡ್ಯಂತ್ರ: ಬಿ.ಆರ್.ಪಾಟೀಲ್

ಬೆಂಗಳೂರು, ಸೆ.14: ತುಮಕೂರಿನ ಸಿದ್ದಗಂಗಾ ಮಠದ ಶ್ರೀಗಳು ಪ್ರತ್ಯೇಕ ಲಿಂಗಾಯತ ಧರ್ಮ ಅಗತ್ಯವಿಲ್ಲ ಎಂದಿರುವ ಹಿಂದೆ ಸಂಘಪರಿವಾರದ ಷಡ್ಯಂತ್ರ ಇದೆ ಎಂದು ಶಾಸಕ ಹಾಗೂ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಸಮಿತಿ ಮುಖಂಡ ಬಿ.ಆರ್.ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ಕುರಿತಂತೆ ಉಂಟಾಗಿದ್ದ ವಿವಾದಕ್ಕೆ ತೆರೆ ಎಳೆಯಲು ಕರೆಯಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳ ಹೇಳಿಕೆ ಒಂದೇ ದಿನದಲ್ಲಿ ಎರಡು ಬಾರಿ ಬದಲಾವಣೆಯಾಗಿದೆ. ಅಲ್ಲದೆ, ಹಿಂದೂ ಧರ್ಮದಿಂದ ಲಿಂಗಾಯತ ಸಮುದಾಯ ಪ್ರತ್ಯೇಕಗೊಂಡರೆ ತಮ್ಮ ಆಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಹಿನ್ನೆಲೆಯಲ್ಲಿ ಸಂಘಪರಿವಾರದ ಮುಖಂಡರು ಸ್ವಾಮೀಜಿಗಳ ಮೇಲೆ ಪ್ರಭಾವ ಬೀರಿ ಷಡ್ಯಂತ್ರ ನಡೆಸಿರುವುದಾಗಿ ದೂರಿದರು.
ಸಿದ್ದಗಂಗಾ ಶ್ರೀಗಳ ಮನವಿ ಮೇರೆಗೆ ರವಿವಾರ ಸಚಿವ ಎಂ.ಬಿ.ಪಾಟೀಲ್ ಮಠಕ್ಕೆ ಭೇಟಿ ನೀಡಿ, ಪ್ರತ್ಯೇಕ ಲಿಂಗಾಯತ ಧರ್ಮ ಕುರಿತಂತೆ ಶಿವಕುಮಾರ ಸ್ವಾಮೀಜಿಗಳ ಜತೆ ಚರ್ಚಿಸಿ ಒಪ್ಪಿಗೆ ಪಡೆದಿದ್ದರು. ಆದರೆ, ಸಂಜೆಯೊಳಗೆ ಮಠದಿಂದ ಪತ್ರಿಕಾ ಪ್ರಕಟನೆಗಳು ಬಿಡುಗಡೆಯಾಗಿರುವ ಬಗ್ಗೆ ಅನುಮಾನವಿದ್ದು, ಹೊಸದಿಲ್ಲಿ ವರಿಷ್ಠರು ಸಂಘಪರಿವಾರದ ಮೂಲಕ ಪ್ರಭಾವ ಬೀರಿ ಈ ಕುತಂತ್ರ ನಡೆಸಿದ್ದಾರೆ ಎಂದು ಬಿ.ಆರ್.ಪಾಟೀಲ್ ನುಡಿದರು.
ಹೆದರ ಬೇಡಿ: ಸಚಿವ ಎಂ.ಬಿ.ಪಾಟೀಲ್ ಯಾವುದಕ್ಕೂ ಹೆದರಬಾರದು ಎಂದ ಅವರು, ಪ್ರತ್ಯೇಕ ಧರ್ಮ ಚಳವಳಿಯನ್ನು ದಿಕ್ಕು ತಪ್ಪಿಸಬಹುದೆಂದು ಕೆಲವರ ಆಲೋಚನೆಯಾಗಿದೆ, ಆದ್ದರಿಂದಲೇ ಎಂ.ಬಿ.ಪಾಟೀಲ್ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಅಲ್ಲದೆ, ಲಿಂಗಾಯತ ಸಮುದಾಯ ಅವರ ಬೆಂಬಲಕ್ಕೆ ನಿಂತಿದೆ ಎಂದು ಹೇಳಿದರು.
ಆಶೀರ್ವಾದ: ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಮಾತನಾಡಿ, ಸಚಿವ ಎಂ.ಬಿ.ಪಾಟೀಲ್ ಅವರಿಗೆ ಮಠದಿಂದ ದೂರವಾಣಿ ಕರೆ ಬಂದಿತ್ತು. ಅದರಂತೆ ಸಚಿವರು ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದು ಪ್ರತ್ಯೇಕ ಧರ್ಮಕ್ಕೆ ಸಹಕಾರ ಕೋರಿದ್ದರು. ಈ ಬಗ್ಗೆ ಸ್ವಯಃ ಆಡಳಿತಾಧಿಕಾರಿಯೇ ಇದನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ಸಂಜೆ ವೇಳೆಗೆ ಇದ್ದಕ್ಕಿದ್ದಂತೆ ಗೊಂದಲದ ಪ್ರಕಟನೆಗಳು ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ವಿನಯ್ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯ ಬಸವರಾಜಹೊರಟ್ಟಿ, ಹೋರಾಟ ಸಮಿತಿಯ ಸಂಚಾಲಕ ಜಯಣ್ಣ ಸೇರಿ ಪ್ರಮುಖರಿದ್ದರು.
ಸಚಿವ ಎಂ.ಬಿ.ಪಾಟೀಲ್ ಅವರ ಬಗ್ಗೆ ಮಾಜಿ ಸಚಿವ ವಿ.ಸೋಮಣ್ಣ ಏಕವಚನದಲ್ಲಿ ಮಾತನಾಡಿರುವುದನ್ನು ನಮ್ಮ ಸಮಾಜ ಖಂಡಿಸುತ್ತದೆ. ಮುಂದೆ ಇದೇ ರೀತಿ ಮಾತನಾಡಿದರೆ ನಾವೂ ಕೂಡ ಅದೇ ರೀತಿಯಲ್ಲಿ ಮಾತನಾಡಬೇಕಾಗುತ್ತದೆ. ಅಲ್ಲದೆ, ಸೋಮಣ್ಣ ಶಾಸಕರಾಗುವ ಮುನ್ನ ಎಲ್ಲಿದ್ದರು, ಇವರ ಹಿನ್ನೆಲೆ ಏನು ಎಂಬುವುದನ್ನು ನಾವು ಮಾತನಾಡಬೇಕಾಗುತ್ತದೆ.
-ವಿನಯ್ ಕುಲಕರ್ಣಿ, ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ
ಎಂ.ಬಿ.ಪಾಟೀಲರಿಗೆ ಮುಖಂಡರ ಬೆಂಬಲ: ಸಚಿವ ಎಂ.ಬಿ.ಪಾಟೀಲರು ತಮ್ಮ ಸ್ವಾರ್ಥಕ್ಕಾಗಿ ಹೋರಾಟ ಮಾಡುತ್ತಿಲ್ಲ. ಇದರಿಂದ ಅವರಿಗೆ ಆಗಬೇಕಾದ್ದು ಏನೂ ಇಲ್ಲ. ಸಮಾಜದ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಈ ಘಟನೆಯಿಂದ ಸ್ವತಃ ಪಾಟೀಲರು ಹಾಗೂ ಅವರ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಆದರೆ, ಅವರು ಬೇಸರ ಪಟ್ಟುಕೊಳ್ಳಬಾರದು. ಇಡೀ ಲಿಂಗಾಯತ ಸಮಾಜ ಅವರ ಬೆಂಬಲಕ್ಕೆ ನಿಂತಿದೆ ಎಂದು ಸಮುದಾಯದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಸಿದರು.







