13 ಕೋಟಿ ರೂ. ತೆರಿಗೆ ಪಾವತಿಸಲು ಸರಕಾರಕ್ಕೆ ಪಾಲಿಕೆಯಿಂದ ನೋಟಿಸ್

ಬೆಂಗಳೂರು, ಸೆ.14: ಸರಕಾರದ ಸಾಧನೆಗಳನ್ನು ಬಿಂಬಿಸಲು ಅನುಮತಿ ಪಡೆಯದೆ ನಗರದ ಬಿಎಂಟಿಸಿ ಬಸ್ ತಂಗುದಾಣಗಳಲ್ಲಿ ಜಾಹೀರಾತು ಪ್ರದರ್ಶಿಸಿರುವ ಹಿನ್ನೆಲೆಯಲ್ಲಿ 13 ಕೋಟಿ ರೂ. ತೆರಿಗೆಯನ್ನು ತಕ್ಷಣವೇ ಪಾವತಿಸುವಂತೆ ಬಿಬಿಎಂಪಿ ರಾಜ್ಯ ಸರಕಾರಕ್ಕೆ ಎರಡನೆಯ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಿದೆ.
ನಗರದ 489 ಬಸ್ ಶೆಲ್ಟರ್‌ಗಳಲ್ಲಿ ಪಾಲಿಕೆಯ ಅನುಮತಿ ಪಡೆದುಕೊಳ್ಳದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರಕಾರದ ಸಾಧನೆಗಳನ್ನು ಬಿಂಬಿಸುವ ಸಲುವಾಗಿ ಜಾಹೀರಾತು ರೂಪದಲ್ಲಿ ಪ್ರದರ್ಶಿಸಿತ್ತು. ಇದರಿಂದ ಪಾಲಿಕೆಗೆ ತೆರಿಗೆ ವಂಚಿಸಲಾಗಿತ್ತು. ಈ ಸಂಬಂಧ ಜು.15 ರಂದು 13 ಕೋಟಿ ರೂ. ಗಳ ಜಾಹೀರಾತು ತೆರಿಗೆಯನ್ನು ಪಾವತಿಸುವಂತೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿತ್ತು.
ಮೊದಲ ನೋಟಿಸ್ ಜಾರಿ ಮಾಡಿ 70 ದಿನಗಳಾದರೂ ಬಿಬಿಎಂಪಿಗೆ ಜಾಹೀರಾತು ತೆರಿಗೆಯನ್ನು ಸರಕಾರ ಇನ್ನೂ ಪಾವತಿಸಿಲ್ಲ. ಹಾಗಾಗಿ ಬಿಬಿಎಂಪಿ ಗುರುವಾರ ಎರಡನೆಯ ಬಾರಿಗೆ ಡಿಮ್ಯಾಂಡ್ ನೋಟಿಸನ್ನು ಸರಕಾರಕ್ಕೆ ಜಾರಿ ಮಾಡಿ 13 ಕೋಟಿ ರೂ. ಜಾಹೀರಾತು ತೆರಿಗೆಯನ್ನು ಪಾವತಿಸುವಂತೆ ಸೂಚಿಸಲಾಗಿದೆ.





