ಜಾತಿ ನಿರ್ಮೂಲನೆಗೆ ವಿದ್ಯಾರ್ಥಿ ಆಂದೋಲನ ಅಗತ್ಯ: ಡಾ.ಜಿ.ಪರಮೇಶ್ವರ್
.jpg)
ಬೆಂಗಳೂರು, ಸೆ.14: ವಿದ್ಯಾರ್ಥಿಗಳು ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಪ್ರತಿಭಟನೆ ಕೈಗೊಳ್ಳುವ ಜೊತೆಯಲ್ಲಿಯೇ ದೇಶವನ್ನು ಸಾವಿರಾರು ವರ್ಷಗಳಿಂದ ಕಾಡುತ್ತಿರುವ ಜಾತೀಯತೆಯ ವಿರುದ್ಧ ದೊಡ್ಡ ಮಟ್ಟದ ಆಂದೋಲನವನ್ನು ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಅಖಿಲ ಭಾರತ ಸ್ವಾತಂತ್ರ ಹೋರಾಟಗಾರರ ಸಮಿತಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಬಿಹಾರದ ಚಂಪಾರಣ್ ಸತ್ಯಾಗ್ರಹದ ಶತಮಾನೋತ್ಸವ ಹಾಗೂ ಸ್ವಾತಂತ್ರ ಹೋರಾಟಗಾರ ಶತಾಯುಷಿ ಪಾವಗಡದ ದಾಸಣ್ಣರಿಗೆ ಅಭಿನಂದನೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ ಬಂದ ನಂತರ ದೇಶದಲ್ಲಿರುವ ಜಾತೀಯತೆ ತಾನಾಗಿಯೇ ತೊಲಗುತ್ತದೆ ಎಂದು ಮಹಾತ್ಮ ಗಾಂಧೀಜಿ ಸೇರಿದಂತೆ ಸ್ವಾತಂತ್ರಕ್ಕಾಗಿ ಹೋರಾಡಿದ ಲಕ್ಷಾಂತರ ಮಂದಿಯ ಕನಸಾಗಿತ್ತು. ಆದರೆ, ಕಾಲ ಕಳೆದಂತೆ ಜಾತಿ, ಧರ್ಮಗಳ ಮೇಲಾಟ ಹೆಚ್ಚಾಗುತ್ತಲೇ ಇದೆ. ಇದನ್ನು ತೊಲಗಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ದೊಡ್ಡ ಮಟ್ಟದ ಆಂದೋಲನ ನಡೆಸಬೇಕಾಗುತ್ತದೆ ಎಂದು ಹೇಳಿದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತಿನ ಮುಂಚೂಣಿ ದೇಶಗಳಲ್ಲಿ ಭಾರತವೂ ಒಂದಾಗಿದೆ. ಆದರೆ, ವೈಚಾರಿಕೆ ಚಿಂತನೆ, ಸಂಪನ್ಮೂಲಗಳ ಸಮಾನ ಹಂಚಿಕೆಯಲ್ಲಿ ಸಾಕಷ್ಟು ಹಿಂದುಳಿದಿದೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿಯೇ ಇಡಲು ಜನತೆಗೆ ಮಂಕುಬೂದಿ ಎರಚುತ್ತಿದ್ದಾರೆ. ಈ ಬಗ್ಗೆ ಪ್ರಜ್ಞಾವಂತರು ಎಚ್ಚರವಹಿಸಬೇಕು ಎಂದರು.
ಇಂದಿಗೂ ರಾಜ್ಯದಲ್ಲಿ ಶೇ.38ರಷ್ಟು ಬಡತನವಿದೆ. ಇಂತಹ ಸ್ಥಿತಿಗೆ ಕೇವಲ ಸರಕಾರಗಳನ್ನು ಮಾತ್ರ ಜವಾಬ್ದಾರರನ್ನಾಗಿ ಮಾಡಬಾರದು. ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಜಾರಿಯಲ್ಲಿದ್ದ ಆರ್ಥಿಕ, ಸಾಮಾಜಿಕ ಸಂರಚನೆಗಳು ಸೇರಿದಂತೆ ಅನೇಕ ಅಂಶಗಳು ಬಡವರನ್ನು ಬಡವರನ್ನಾಗಿಯೇ ವಂಚಿಸಲಾಗುತ್ತಿದೆ ಎಂದು ವಿಷಾದಿಸಿದರು.
ಹಿರಿಯ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಮಾತನಾಡಿ, ರಾಷ್ಟ್ರದಲ್ಲಿ ನಾಥೂರಾಮ ಗೂಡ್ಸೆ ಸಂತತಿ ಹೆಚ್ಚಾಗುತ್ತಿದ್ದು, ಇಲ್ಲಿನ ಬಹುಧರ್ಮ, ವಿಭಿನ್ನ ಸಂಸ್ಕೃತಿಯನ್ನು ಹಾಳು ಮಾಡಲು ಹೊರಟಿದ್ದಾರೆ. ಇಂತಹ ಕೋಮುವಾದಿಗಳ ಕೈಗೆ ಯುವ ಜನತೆ ಸಿಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಿಳಿಸಿದರು.
ಸಂಘಪರಿವಾರ, ಬಿಜೆಪಿ ಗೋ ಹತ್ಯೆ ಹೆಸರಲ್ಲಿ ದೇಶದಲ್ಲಿ ಬಹುಸಂಖ್ಯಾತರ ಆಹಾರವನ್ನು ಕಿತ್ತುಕೊಳ್ಳಲಾಗುತ್ತಿದೆ. ಕೃಷಿಗಾಗಿ ಜಾನುವಾರು ಸಾಗಾಟ ಮಾಡುವವರ ಮೇಲೆ ಮಾರಣಾಂತಿಕ ಹಲ್ಲೆಗಳನ್ನು ನಡೆಸಲಾಗುತ್ತಿದೆ. ಇವರ ಸ್ವಾರ್ಥ ಹಿತಾಸಕ್ತಿಗಾಗಿ ದೇಶದ ಕೃಷಿ ಕ್ಷೇತ್ರ ಅವನತಿಯ ಹಂತಕ್ಕೆ ಮುಟ್ಟಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಈ ವೇಳೆ ಹಿರಿಯ ಸ್ವಾತಂತ್ರ ಹೋರಾಟಗಾರ ಶತಾಯುಷಿ ಪಾವಗಡ ದಾಸಣ್ಣರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಲೇಖಕಿ ಡಾ.ಮೀನಾ ದೇಶಪಾಂಡೆ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಉಪಸ್ಥಿತರಿದ್ದರು.







