ಭ್ರಷ್ಟಾಚಾರ ಕುರಿತು ಮಾತನಾಡಲು ಬಿಎಸ್‌ವೈಗೆ ನೈತಿಕತೆ ಇಲ್ಲ: ವಿ.ಎಸ್.ಉಗ್ರಪ್ಪ

ಬೆಂಗಳೂರು, ಸೆ.14: ಸ್ವತಃ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರಿಗೆ ಭ್ರಷ್ಟಾಚಾರ ರಹಿತ ಕರ್ನಾಟಕದ ಕುರಿತು ಮಾತನಾಡಲು ಯಾವ ನೈತಿಕತೆಯಿದೆ ಎಂದು ಹಿರಿಯ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಬುಧವಾರ ಮಾತನಾಡುತ್ತಾ ನಾನು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ರಹಿತ ಕರ್ನಾಟಕ ಹಾಗೂ ಅಭಿವೃದ್ಧಿ ಪರ ಕರ್ನಾಟಕ ನಿರ್ಮಿಸುತ್ತೇವೆಂದು ಹೇಳಿರುವುದು ಕೇವಲ ಬಾಯಿ ಮಾತಾಗಿ, ಚುನಾವಣೆಯ ಪ್ರಚಾರವಷ್ಟಕ್ಕೆ ಸೀಮಿತವಾಗಿದೆ ಎಂದು ತಿಳಿಸಿದರು.
ರಾಜ್ಯದ ಇತಿಹಾಸದಲ್ಲಿ ಭ್ರಷ್ಟಾಚಾರದ ಆರೋಪದಲ್ಲಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋಗಿರುವ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಅವರ ಆಡಳಿತದಲ್ಲಿ ಸುಮಾರು ಒಂದು ಲಕ್ಷ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದೆ. ಇವರ ಸಚಿವ ಸಂಪುಟದಲ್ಲಿದ್ದವರು ಹಲವು ಸಚಿವರು ಇವರಂತೆಯೇ ಜೈಲಿನ ರುಚಿ ಕಂಡಿದ್ದಾರೆ. ಇಂತವರು ಭ್ರಷ್ಟಾಚಾರದ ನಿರ್ಮೂಲನೆ ಕುರಿತು ಮಾತನಾಡುತ್ತಾರೆ ಎಂದು ಅವರು ಲೇವಡಿ ಮಾಡಿದರು.
ಬಿಜೆಪಿ ಆಡಳಿತದಲ್ಲಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತ ನಡೆದಿರುವ ಕಾರ್ಯಕ್ರಮಗಳ ಕುರಿತು ಬಿಜೆಪಿ ಮುಖಂಡರು ಬಹಿರಂಗ ಚರ್ಚೆಗೆ ಬರಲಿ. ಬಿಜೆಪಿ ಕಚೇರಿಯ ಮುಂಭಾಗವೇ ಚರ್ಚೆಗೆ ಆಹ್ವಾನಿಸಿದರೂ ನಾವು ಸಿದ್ಧರಿದ್ದೇವೆ. ಹಾಗೆಯೇ ಮಾಜಿ ಪ್ರಧಾನಿ ಮಂತ್ರಿ ಮನಮೋಹನ ಸಿಂಗ್ ಆಡಳಿತ ಹಾಗೂ ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿಗಳ ಬಗೆಗೂ ಚರ್ಚೆ ನಡೆಯಲಿ.
-ಉಗ್ರಪ್ಪ, ಹಿರಿಯ ಸದಸ್ಯ ವಿಧಾನ ಪರಿಷತ್







