ಸಿಂಡ್ ಬ್ಯಾಂಕಿಗೆ ಹಿಂದಿ ದಿವಸ್ ರಾಷ್ಟ್ರೀಯ ಪ್ರಶಸ್ತಿ

ಮಣಿಪಾಲ, ಸೆ.14: ಕೇಂದ್ರ ಗೃಹ ಮಂತ್ರಾಲಯದ ರಾಜಭಾಷಾ ವಿಭಾಗದ ವತಿಯಿಂದ ಗುರುವಾರ ಹೊಸದಿಲ್ಲಿಯಲ್ಲಿ ಹಿಂದಿ ದಿವಸದ ಸಂದರ್ಭದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಸಿಂಡಿಕೇಟ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೇಲ್ವಿನ್ ರೇಗೋ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ರಾಜಭಾಷಾ ಕೀರ್ತಿ ಪುರಸ್ಕಾರವನ್ನು ಸ್ವೀಕರಿಸಿದರು.
2016-17ನೇ ಸಾಲಿನಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳು/ಸಾರ್ವಜನಿಕ ಉಪಕ್ರಮಗಳು/ಕೇಂದ್ರ ಸರಕಾರಿ ಸಂಘಟನೆಗಳು ಪ್ರಕಟಿಸಿದ ಪತ್ರಿಕೆಗಳಲ್ಲಿ ಸಿಂಡಿಕೇಟ್ ಬ್ಯಾಂಕಿನ ಆಂತರಿಕ ಪತ್ರಿಕೆಯಾದ ‘ಜಾಗೃತಿ’ಗೆ ರಾಜಭಾಷಾ ಕೀರ್ತಿ ಪುರಸ್ಕಾರ ಪ್ರಥಮ ಸ್ಥಾನ ದೊರಕಿದೆ.
ರಾಜಭಾಷಾ ನೀತಿಗಳನ್ನು ಅತ್ಯುತ್ತಮವಾಗಿ ಪರಿಪಾಲಿಸಿರುವುದಕ್ಕೆ ‘ಗ’ ಕ್ಷೇತ್ರದ ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ಸಿಂಡಿಕೇಟ್ ಬ್ಯಾಂಕ್ ಸತತ ಮೂರನೇ ವರ್ಷದಲ್ಲಿ ರಾಷ್ಟ್ರೀಯ ಪ್ರಥಮ ಪುರಸ್ಕಾರವನ್ನು ಪಡೆಯುತ್ತಿದೆ. ಈ ಹಿಂದೆ 2014-15 ಹಾಗೂ 2015-16ನೇ ಸಾಲಿನಲ್ಲೂ ಸಿಂಡಿಕೇಟ್ ಬ್ಯಾಂಕ್ ಪ್ರಥಮ ಸ್ಥಾನ ಪಡೆದಿತ್ತು.





