ಎಂಡೋ ಪೀಡಿತರ ನೆರವಿಗೆ ವಿಶೇಷ ಯೋಜನೆ: ಉಜಿರೆಯಲ್ಲಿ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ

ಉಪ್ಪಿನಂಗಡಿ, ಸೆ. 14: ಎಂಡೋ ಪೀಡಿತರಿಗಾಗಿ ಉಜಿರೆಯಲ್ಲಿ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ ಆಗಲಿದ್ದು, ರಾಜ್ಯ ಸರ್ಕಾರ, ಟಿವಿ-9 ಸಂಸ್ಥೆ ಸಹಯೋಗದಲ್ಲಿ ಸಾನಿಧ್ಯ ವಿಶೇಷ ಮಕ್ಕಳ ವಸತಿ ಶಾಲೆ, ತರಬೇತಿ ಕೇಂದ್ರ ಮಂಗಳೂರು ಇದರ ನಿರ್ವಹಣೆ ಮಾಡಲಿದ್ದು, ಇದರ ಸಲುವಾಗಿ ಈ ಯೋಜನೆಯ ಒಡಂಬಡಿಕೆಗೆ ಒಪ್ಪಂದ ಸಭೆ ಬೆಂಗಳೂರುನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯ ಸಮಿತಿ ಸಭೆ ಸಭಾಂಗಣದಲ್ಲಿ ನಡೆಯಿತು.
ದ.ಕ. ಜಿಲ್ಲೆಯ ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಎಂಡೋಸಲ್ಫಾನ್ ದುಷ್ಪರಿಣಾದಿಂದಾಗಿ ಅಂಗ ಹೀನತೆ ಮೊದಲಾದ ಕಾಯಿಲೆಯಿಂದ ಬಳಲುತ್ತಿದ್ದ ಎಂಡೋ ಪೀಡಿತ ಕುಟುಂಬಗಳ ನರಕಯಾತನೆ ಬಗ್ಗೆ ಟಿವಿ-9 ದೃಶ್ಯ ಮಾದ್ಯಮ ಅಭಿಯಾನ ನಡೆಸಿತ್ತು ಮತ್ತು ಈ ಕುಟುಂಬಗಳ ನೆರವು ಸಲುವಾಗಿ ಟಿವಿ-9 ಸಾರ್ವಜನಿಕ ದೇಣಿಗೆಯಾಗಿ 1 ಕೋಟಿ 39 ಸಂಗ್ರಹಿಸಿದ್ದು, ಆ ಮೂಲಕ ಟಿವಿ-9 ಎಂಡೋ ಪೀಡಿತರ ನೆರವಿಗೆ ಬಂದು ಸರ್ಕಾರದ ಮೂಲಕ ಕೌಶಲ್ಯ ತರಬೇತಿ ಕೇಂದ್ರ ತೆರೆಯಲು ಮುಂದಾಗಿದೆ.
ಸರ್ಕಾರದ ವತಿಯಿಂದ ಈಗಾಗಲೇ ಉಜಿರೆಯಲ್ಲಿ 1 ಎಕರೆ ಪ್ರದೇಶದಲ್ಲಿ ಕೇಂದ್ರ ತೆರೆಯಲಾಗಿದ್ದು, 2 ಹಾಲ್, 6 ತರಗತಿ ಕೊಠಡಿ, 1 ಡೈನಿಂಗ್ ಹಾಲ್ ವ್ಯವಸ್ಥೆಯ ಕಟ್ಟಡ ನಿರ್ಮಿಸಲಾಗಿದೆ. ಇದರ ನಿರ್ವಹಣೆಯನ್ನು ಮಂಗಳೂರು "ಸಾನಿಧ್ಯ" ಸಂಸ್ಥೆ ನಿರ್ವಹಿಸಲಿದ್ದು, ಇದರ ಸಲುವಾಗಿ ಸರ್ಕಾರ, ಟಿವಿ-9 ಸಂಸ್ಥೆ ಮತ್ತು ಸಾನಿಧ್ಯ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿತು. ಇದರಲ್ಲಿ ವೈದ್ಯಕೀಯ ತಪಾಸೆಗೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಆರೋಗ್ಯ ಸಚಿವ ರಮೇಶ್ ಕುಮಾರ್, ಹಿಂದಿನ ಆರೋಗ್ಯ ಸಚಿವ, ಪ್ರಸಕ್ತ ಆಹಾರ ಸಚಿವ ಯು.ಟಿ. ಖಾದ್, ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಟಿವಿ-9 ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕ ಮಹೇಂದ್ರ ಮಿಶ್ರ, ಕಾರ್ಯಕಾರಿ ನಿರ್ಮಾಪಕ ರವಿಕುಮಾರ್, ತಾಂತ್ರಿಕ ಮುಖ್ಯಸ್ಥ ಶ್ರೀಕಾಂತ್, ಪ್ರತಿನಿಧಿಗಳಾದ ಪ್ರಮೋದ್ ಶಾಸ್ತ್ರಿ, ವಿನಾಯಕ ಗಂಗೊಳ್ಳಿ, ಸಾನಿಧ್ಯ ಸಂಸ್ಥೆಯ ಅಧ್ಯಕ್ಷ ಮಹಾಬಲ ಮಾರ್ಲ, ಕಾರ್ಯದರ್ಶಿ ವಸಂತಕುಮಾರ್ ಶೆಟ್ಟಿ, ದ.ಕ. ಜಿಲ್ಲಾ ಆರೋಗ್ಯ ಅಧಿಕಾರಿ ರಾಮಕೃಷ್ಣ ರಾವ್, ದ.ಕ. ಜಿಲ್ಲಾ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್, ಕಾರ್ಯದರ್ಶಿ ಜಯಕರ ಪೂಜಾರಿ, ಸದಸ್ಯ, ಪತ್ರಕರ್ತ ಸಿದ್ದಿಕ್ ನೀರಾಜೆ, ಎಂಡೋ ಸಂತ್ರಸ್ಥರ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ಗಂಗಾರತ್ನ ವಸಂತ, ನೋಡೆಲ್ ಅಧಿಕಾರಿ ತಾಜುದ್ದೀನ್ ಇತರರು ಉಪಸ್ಥಿತರಿದರು.
ಕಲಾ ಪ್ರದರ್ಶನ: ಈ ಸಂದರ್ಭದಲ್ಲಿ ಮಂಗಳೂರು ಸಾನಿದ್ಯ ವಿಶೇಷ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ, ಹಾಡುಗಾರಿಕೆ ಮತ್ತು ವಿದ್ಯಾರ್ಥಿಗಳು ತಯಾರಿಸಿದ ಕರಕುಶಲ ವಸ್ತು, ಆಟಿಕೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಮಕ್ಕಳ ಪ್ರತಿಭೆ ಬಗ್ಗೆ ಮುಖ್ಯಮಂತ್ರಿ ಪ್ರಶಂಸೆ ವ್ಯಕ್ತಪಡಿಸಿದರು.
3 ತಿಂಗಳಿನಲ್ಲಿ ಆರಂಭ: ಸಭೆಯಲ್ಲಿ ಸಂಸ್ಥೆಗಳು ಒಡಂಬಡಿಕೆ ಸಹಿ ನಡೆದ ಬಳಿಕ ಸಚಿವ ರಮೇಶ್ ಕುಮಾರ್ ಮಾತನಾಡಿ ತರಬೇತಿ ಶಾಲೆಯಲ್ಲಿ ಎಲ್ಲಾ ಪೂರ್ವ ಸಿದ್ಧತೆಗಳು ನಡೆದಿದೆ, ಇನ್ನು 3 ತಿಂಗಳಲ್ಲಿ ತರಬೇತಿ ನಡೆಯಲಿದೆ ಎಂದರು.
ಎಂಡೋ ಪೀಡಿತರ ಪರಿಹಾರಕ್ಕೆ ಸಂಬಂಧಿಸಿದ ಪ್ರಸ್ತಾಪ ಹಣಕಾಸು ಇಲಾಖೆ ಮುಂದಿದೆ 3 ವಿಭಾಗದಲ್ಲಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು, ಕೇರಳ ಮಾದರಿಕ್ಕಿಂತ 1 ಹೆಜ್ಜೆ ಮುಂದೆ ಇರುವ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.







