ರಾಜ್ಯ ಸರಕಾರ ಯಾವುದೇ ಜಮೀನನ್ನು ಡಿ-ನೋಟಿಫೈ ಮಾಡಿಲ್ಲ: ಮುಖ್ಯಮಂತ್ರಿ ಸಚಿವಾಲಯದಿಂದ ಸ್ಪಷ್ಟನೆ
ಬೆಂಗಳೂರು, ಸೆ.14: ಡಾ.ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ 1300 ಎಕರೆ ಜಮೀನನ್ನು ಸರಕಾರ ಡಿ-ನೋಟಿಫೈ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಚಿವಾಲಯವು ಸ್ಪಷ್ಟಪಡಿಸಿದೆ.
ಡಾ ಕೆ. ಶಿವರಾಮ ಕಾರಂತ ಬಡಾವಣೆಯ ರಚನೆಗೆ 3546 ಎಕರೆ ಜಮೀನನ್ನು 2008ರಲ್ಲಿ ಅಧಿಸೂಚಿಸಲಾಗಿತ್ತು. ಉದ್ದೇಶಿತ ಭೂ-ಸ್ವಾಧೀನದಲ್ಲಿ 257.20 ಎಕರೆ ಜಮೀನನ್ನು ಹೊರತುಪಡಿಸಲು ಹಿಂದಿನ ಸರಕಾರವು 2008 ರಿಂದ 2010 ರಲ್ಲಿ ಬಿಡಿಎಗೆ ನಿರ್ದೇಶನ ನೀಡಿತ್ತು. ಅಂತೆಯೇ, 2012 ರಿಂದ 2014ರ ಅವಧಿಯಲ್ಲಿ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶಗಳಲ್ಲಿನ ಮಾನದಂಡಗಳಿಗೆ ಅನುಗುಣವಾಗಿ ಬಿಡಿಎ ಭೂ-ಸ್ವಾಧೀನಾಧಿಕಾರಿಗಳು 446.07 ಎಕರೆ ಜಮೀನನ್ನು ಭೂ-ಸ್ವಾಧೀನ ಪ್ರಕ್ರಿಯೆಯಿಂದ ಹೊರತು ಪಡಿಸಿದ್ದಾರೆ.
ಡಾ ಕೆ. ಶಿವರಾಮ ಕಾರಂತ ಬಡಾವಣೆಗೆ ಭೂ-ಸ್ವಾಧೀನ ಮಾಡಿರುವುದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಅಂತಿಮ ಅಧಿಸೂಚನೆ ಹೊರಡಿಸುವ ಮೂಲಕ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಲ್ಲಿ, ಐತೀರ್ಪು ರಚಿಸುವಲ್ಲಿ, ಹಣ ಪಾವತಿಸುವಲ್ಲಿ ಹಾಗೂ ಜಮೀನನ್ನು ವಶಕ್ಕೆ ಪಡೆಯುವಲ್ಲಿ ರಾಜ್ಯ ಸರಕಾರ ಹಾಗೂ ಬಿಡಿಎ ಯಾವುದೇ ಕ್ರಮವನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಡಾ. ಕೆ.ಶಿವರಾಮ ಕಾರಂತ ಬಡಾವಣೆಯ ನಿರ್ಮಾಣ ಯೋಜನೆಯನ್ನು ಹೈಕೋರ್ಟ್ ತನ್ನ 2015 ಸೆ.2ರ ಆದೇಶದಲ್ಲಿ ಅನೂರ್ಜಿತಗೊಳಿಸಿದೆ.
ಭೂ-ಸ್ವಾಧೀನ ಕಾನೂನುಗಳ ಪ್ರಕಾರ ಸ್ವಾಧೀನ ಪ್ರಕ್ರಿಯೆಯು ಪ್ರಾಥಮಿಕ ಅಧಿಸೂಚನೆಯಾದ ಐದು ವರ್ಷಗಳಲ್ಲಿ ಪೂರ್ಣಗೊಳ್ಳಬೇಕು. ಪ್ರಾಥಮಿಕ ಅಧಿಸೂಚನೆಯಾದ 2008 ರಿಂದ 2013ರವರೆಗೆ ಐದು ವರ್ಷಗಳ ಅವಧಿಯಲ್ಲಿ ಉಂಟಾದ ವಿಳಂಬವೇ ಈ ಯೋಜನೆಯು ಸಂಪೂರ್ಣವಾಗಿ ಫಲಪ್ರದವಾಗದಿರಲು ಕಾರಣವಾಗಿದೆ. ಪ್ರಸಕ್ತ ಸರಕಾರದ ಅವಧಿಯಲ್ಲಿ 2015ರ ಸೆ.2ರಂದು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಯಿತು.
ಏಕ-ಸದಸ್ಯ ಪೀಠದ ತೀರ್ಪಿನಲ್ಲಿನ ಅಂಶಗಳನ್ನು ಉಲ್ಲೇಖಿಸಿ ಈ ಮೇಲ್ಮನವಿಯನ್ನು ವಜಾ ಮಾಡಲಾಗಿ
ಬಿಡಿಎ ಈ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲಿದೆ. ಸುಪ್ರೀಂಕೋರ್ಟ್, ಹೈಕೋರ್ಟ್‌ನ ಮಾನದಂಡಗಳಿಗೆ ಅನುಗುಣವಾಗಿ ವಿಶೇಷ ಭೂ-ಸ್ವಾಧೀನಾಧಿಕಾರಿಗಳು ಜಮೀನನ್ನು ಭೂ-ಸ್ವಾಧೀನ ಪ್ರಕ್ರಿಯೆಯಿಂದ ಹೊರತುಪಡಿಸಿರುವ ಬಗ್ಗೆ ಬಿಡಿಎ ತನ್ನ ಹಂತದಲ್ಲಿ ಭೂ ಮಾಲಕರಿಗೆ ಹಿಂಬರಹ ನೀಡಿದೆ. ಅಲ್ಲದೆ, ಹೈಕೋರ್ಟ್‌ನ ಆದೇಶದಂತೆ ಭೂಸ್ವಾಧೀನವು ಸಂಪೂರ್ಣವಾಗಿ ಅನೂರ್ಜಿತಗೊಂಡಿರುವ ಬಗ್ಗೆಯೂ ಬಿಡಿಎ ಭೂ ಮಾಲಕರಿಗೆ ಹಿಂಬರಹಗಳನ್ನು ನೀಡಿದೆ. ಈ ಹಿಂಬರಹಗಳನ್ನು ಬಿಡಿಎ ಹಂತದಲ್ಲಿ ನೀಡಲಾಗಿದೆ. ಇದರಲ್ಲಿ ಸರಕಾರದ ಯಾವುದೇ ಪಾತ್ರವಿಲ್ಲ. ಹೀಗಾಗಿ, ಸರಕಾರವು 1300 ಎಕರೆ ಜಮೀನನ್ನು ಡಿ-ನೋಟಿಫೈ ಮಾಡಿದೆ ಎಂಬ ಆರೋಪಗಳು ಸುಳ್ಳು, ಆಧಾರ-ರಹಿತ ಹಾಗೂ ಯಾವುದೇ ಸಾಕ್ಷಿ ಅಥವಾ ದಾಖಲೆಗಳಿಲ್ಲದ್ದು ಎಂದು ಮುಖ್ಯಮಂತ್ರಿ ಸಚಿವಾಲಯವು ಸ್ಪಷ್ಟೀಕರಿಸಿದೆ.







