ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯ ಮುಸ್ಲಿಮರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ನಿಲ್ಲಿಸಿ: ವಿಶ್ವಸಂಸ್ಥೆ ಮುಖ್ಯಸ್ಥ

ಮ್ಯಾನ್ಮಾರ್, ಸೆ. 14: ರೋಹಿಂಗ್ಯ ಮುಸ್ಲಿಮರ ವಿರುದ್ಧ ಸೇನೆ ನಡೆಸುತ್ತಿರುವ ದೌರ್ಜನ್ಯವನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಬುಧವಾರ ಮ್ಯಾನ್ಮಾರನ್ನು ಒತ್ತಾಯಿಸಿದೆ. ಈ ಹಿಂಸಾಚಾರವನ್ನು ಬಣ್ಣಿಸಲು ‘ಜನಾಂಗೀಯ ನಿರ್ಮೂಲನೆ’ಯೇ ಸೂಕ್ತ ಪದ ಎಂಬುದಾಗಿ ಅವರು ಬಣ್ಣಿಸಿದ್ದಾರೆ.
‘‘ಮ್ಯಾನ್ಮಾರ್‌ನ ರೋಹಿಂಗ್ಯ ಜನಸಂಖ್ಯೆಯ ಮೂರನೆ ಒಂದು ಭಾಗ ದೇಶದಿಂದ ಪಲಾಯನಗೈಯಬೇಕಾದ ಸನ್ನಿವೇಶ ಸೃಷ್ಟಿಯಾಗಿರುವಾಗ, ಅದನ್ನು ವಿವರಿಸಲು ಬೇರೆ ಪದವನ್ನು ಬಳಸಲು ಸಾಧ್ಯವೇ’’ ಎಂದು ನ್ಯೂಯಾರ್ಕ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗುಟರಸ್ ನುಡಿದರು.
ರಖೈನ್ ರಾಜ್ಯದ ಉತ್ತರ ಭಾಗದಲ್ಲಿರುವ ಹಲವಾರು ರೋಹಿಂಗ್ಯ ಗ್ರಾಮಗಳಿಗೆ ಬೆಂಕಿ ಕೊಡಲಾಗಿದೆ. ಆದರೆ, ಭದ್ರತಾ ಪಡೆಗಳು ಅಥವಾ ಬೌದ್ಧ ನಾಗರಿಕರು ಅವುಗಳಿಗೆ ಬೆಂಕಿ ಕೊಟ್ಟಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಅವರು ರೋಹಿಂಗ್ಯ ಬಂಡುಕೋರರತ್ತ ಬೆರಳು ತೋರಿಸುತ್ತಾರೆ.
ಬುಧವಾರ 45 ಸ್ಥಳಗಳಲ್ಲಿ ಬೆಂಕಿ ಕೊಡಲಾಗಿದೆ ಎಂದು ಸರಕಾರ ಹೇಳಿದೆ. ಆದರೆ ಅದು ವಿವರಗಳನ್ನು ನೀಡಿಲ್ಲ.
ಸರಕಾರದ ವಕ್ತಾರರೊಬ್ಬರ ಪ್ರಕಾರ, ಉತ್ತರ ರಖೈನ್ ರಾಜ್ಯದಲ್ಲಿರುವ 471 ಗ್ರಾಮಗಳ ಪೈಕಿ 176 ಗ್ರಾಮಗಳನ್ನು ಜನರು ತೊರೆದಿದ್ದಾರೆ ಹಾಗೂ ಇತರ 34 ಗ್ರಾಮಗಳಿಂದ ಹಲವು ಮಂದಿ ಹೊರಹೋಗಿದ್ದಾರೆ.
ಬಾಂಗ್ಲಾದೇಶಕ್ಕೆ ಪಲಾಯನಗೈಯುತ್ತಿರುವವರು ಒಂದೋ ಬಂಡುಕೋರರೊಂದಿಗೆ ನಂಟು ಹೊಂದಿರುವವರು ಅಥವಾ ಸಂಘರ್ಷಕ್ಕೆ ಹೆದರಿ ಓಡುತ್ತಿರುವ ಮಹಿಳೆಯರು ಮತ್ತು ಮಕ್ಕಳು ಎಂದು ಅವರು ಹೇಳಿದರು.







