ನ್ಯಾಯಾಂಗ ನಿಂದನೆ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್
ಶಿಕ್ಷಕರು, ಉಪನ್ಯಾಸಕರನ್ನು ಸೇವೆಗೆ ಖಾಯಂಗೊಳಿಸಲು ನಿರಾಕರಿಸಿದ ವಿಚಾರ
ಬೆಂಗಳೂರು, ಸೆ.14: ಬಿಬಿಎಂಪಿ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಸೇವೆಗೆ ಖಾಯಂಗೊಳಿಸಲು ರಾಜ್ಯ ಸರಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.
ಬಿಬಿಎಂಪಿ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿನ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಸೇವೆ ಖಾಯಂಗೊಳಿಸುವಂತೆ ಸರಕಾರಕ್ಕ್ಕೆ ಶಿಫಾರಸು ಮಾಡಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆ ನಿರ್ಣಯವನ್ನು ಸರಕಾರಕ್ಕೆ ಶೀಘ್ರ ಕಳುಹಿಸಿಕೊಡುವಂತೆ ಹೈಕೋರ್ಟ್ ಏಕಸದಸ್ಯ ಪೀಠ 2016ರ ಎ.28ರಂದು ನಿರ್ದೇಶಿಸಿತ್ತು. ಆದರೆ, ಬಿಬಿಎಂಪಿ ಮಾತ್ರ ತನ್ನ ನಿರ್ಣಯವನ್ನು ಸರಕಾರಕ್ಕೆ ಕಳುಹಿಸಿಕೊಡುವಲ್ಲಿ ವಿಳಂಬ ಮಾಡುತ್ತಿದೆ ಎಂದು ದೂರಿ ರಾಘವೇಂದ್ರ ಸೇರಿದಂತೆ ಬಿಬಿಎಂಪಿಯ ವಿವಿಧ ಶಾಲೆಗಳಲ್ಲಿ ಕಾರ್ಯ ನಿವರಹಿಸುತ್ತಿರುವ ಶಿಕ್ಷಕರು ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ವೇಳೆ ಸರಕಾರಿ ವಕೀಲರು ವಾದಿಸಿ, ಬಿಬಿಎಂಪಿ ಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿನ ಶಿಕ್ಷಕರು ಮತ್ತು ಉಪನ್ಯಾಸಕರನ್ನು ನೇರವಾಗಿ ಸೇವೆಗೆ ಖಾಯಂಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿ ರಾಜ್ಯ ಸರಕಾರವು ಬಿಬಿಎಂಪಿ ಶಿಫಾರಸನ್ನು ತಿರಸ್ಕರಿಸಿ ಆದೇಶಿಸಿದೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದರು.
ಮತ್ತೊಂದೆಡೆ ಬಿಬಿಎಂಪಿ ಪರ ವಕೀಲರು ವಾದಿಸಿ, ಹೈಕೋರ್ಟ್ ಏಕಸದಸ್ಯ ಪೀಠದಂತೆ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಸೇವೆಗೆ ಖಾಯಂಗೊಳಿಸಲು ಪಾಲಿಕೆಯು ಸರಕಾರಕ್ಕೆ ಶಿಫಾರಸು ಮಾಡಿದೆ. ಇನ್ನು ಅವರಿಗೆ ಪ್ರತಿ ತಿಂಗಳು ಸಂಬಳ ಪಾವತಿಸಲಾಗುತ್ತಿದೆ. ಯಾರೊಬ್ಬರನ್ನೂ ಕೆಲಸದಿಂದ ತೆಗೆದಿಲ್ಲ. ಹೀಗಾಗಿ, ನ್ಯಾಯಾಂಗ ನಿಂದನೆ ಪ್ರಕ್ರಿಯೆ ಕೈಬಿಡುವಂತೆ ಕೋರಿದರು.
ಇದನ್ನು ಪರಿಗಣಿಸಿದ ನಾಯಮೂರ್ತಿ ಜಯಂತ್ ಪಟೇಲ್ ಮತ್ತು ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ವಿಭಾಗೀಯ ಪೀಠ, ಸರಕಾರವೇ ಅರ್ಜಿದಾರರನ್ನು ಸೇವೆಯನ್ನು ಕಾಯಂಗೊಳಿಸಲು ನಿಕಾರಿಸಿರುವುದರಿಂದ ಅರ್ಜಿ ವಿಚಾರಣಾ ಮಾನ್ಯತೆ ಕಳೆದುಕೊಳ್ಳಲಿದೆ. ಆದರೆ, ಸರಕಾರದ ಆದೇಶವನ್ನು ಅರ್ಜಿದಾರರು ಮತ್ತೆ ಕೊರ್ಟ್‌ನಲ್ಲಿ ಪ್ರಶ್ನಿಸಬಹುದು ಎಂದು ತಿಳಿಸಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಇತ್ಯರ್ಥಪಡಿಸಿತು.







