ವಿಟ್ಲಪಿಂಡಿ: ಬಡಗುಪೇಟೆ ನೂಕುನುಗ್ಗಲಿನಲ್ಲಿ ಸಿಲುಕಿದ ಗರ್ಭಿಣಿ

ಉಡುಪಿ, ಸೆ.14: ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದು ನಡೆದ ಶ್ರೀಕೃಷ್ಣ ಲೀಲೋತ್ಸವ(ವಿಟ್ಲಪಿಂಡಿ)ಯ ಜನಜಂಗುಳಿಯಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸದ ಪರಿಣಾಮ ಮಹಿಳೆಯರು, ಮಕ್ಕಳು ಹಾಗೂ ಗರ್ಭಿಣಿಯರು ತೀರಾ ತೊಂದರೆ ಅನುಭವಿಸುವಂತಾಯಿತು.
ಶೋಭಾ ಯಾತ್ರೆಯ ಮುಗಿಯುತ್ತ ಬರುತ್ತಿದ್ದಂತೆ ಸಾವಿರಾರು ಸಂಖ್ಯೆ ಯಲ್ಲಿದ್ದ ಭಕ್ತರು ಒಮ್ಮೇಲೆ ರಥಬೀದಿಯಿಂದ ಹೊರಗೆ ಹೊರಟರು. ಈ ವೇಳೆ ಬಡಗುಪೇಟೆ ರಸ್ತೆಯಲ್ಲಿ ಸರಿಯಾದ ಪೊಲೀಸ್ ವ್ಯವಸ್ಥೆ ಇಲ್ಲದ ಕಾರಣ ವೇಷಧಾರಿ ಯುವಕರ ತಂಡ ಬೈಕ್ ಜೊತೆ ರಥಬೀದಿಗೆ ಪ್ರವೇಶಿಸಿತು. ಇದರಿಂದ ನೂಕುನುಗ್ಗಲು ಉಂಟಾಯಿತು.
ಇದರ ಪರಿಣಾಮ ಜನಜಂಗುಳಿಯಲ್ಲಿದ್ದ ಗರ್ಭಿಣಿ ಮಹಿಳೆಯೊಬ್ಬರು, ಮಕ್ಕಳು ತೀವ್ರ ತೊಂದರೆ ಅನುಭವಿಸುಂತಾಯಿತು. ಬಳಿಕ ಪೊಲೀಸರು ಆಗ ಮಿಸಿ ಗರ್ಭಿಣಿ ಹಾಗೂ ಮಹಿಳೆಯರು ಮಕ್ಕಳನ್ನು ಕೃಷ್ಣಾಪುರ ಮಠದ ಜಗುಲಿಗೆ ಕರೆದುಕೊಂಡು ಹೋದರು. ಈ ಮಧ್ಯೆ ಸಿಲುಕಿಕೊಂಡ ಐಸ್‌ಕ್ಯಾಂಡಿ ಮಾರಾಟ ಗಾರರೊಬ್ಬರ ಸೈಕಲ್ ಚರಂಡಿಗೆ ಬಿತ್ತೆನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಳಿಕ ಜನರನ್ನು ನಿಯಂತ್ರಿಸಿ ಕಳುಹಿಸಿದರು. ಈ ಕುರಿತ ಅವ್ಯವಸ್ಥೆ ಬಗ್ಗೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನದಿ ಉಳಿಸಿ ಅಭಿಯಾನ: ಇಂದು ನಡೆದ ವಿಟ್ಲಪಿಂಡಿ ಶೋಭಾಯಾತ್ರೆ ಯಲ್ಲಿ ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಚಂಡೆ ಬಳಗದ ಹುಲಿವೇಷ ತಂಡ ದಿಂದ ನದಿ ಉಳಿಸಿ ಅಭಿಯಾನವನ್ನು ನಡೆಸಲಾಯಿತು. ಹುಲಿ ನರ್ತನದ ಜೊತೆ ಫಲಕಗಳನ್ನು ಹಿಡಿದುಕೊಂಡ ಕಾರ್ಯಕರ್ತರು ನದಿಯನ್ನು ಉಳಿಸಿ ಅಭಿಯಾನದ ಪ್ರಚಾರ ನಡೆಸಿದರು.







