ಸೆ.15 ರಿಂದ ಜಿಲ್ಲಾ ಮಟ್ಟದ ಕಾರ್ಯಾಗಾರ: ಎಸ್.ಎಚ್. ಗಂಗೇಗೌಡ
.jpg)
ಹಾಸನ, ಸೆ.14: ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲ್ಯ ಕುರಿತು ಸೆಪ್ಟಂಬರ್ 15 ಮತ್ತು 16 ರಂದು ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದಾಗಿ ಸರಕಾರಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಎಸ್.ಎಚ್. ಗಂಗೇಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆ, ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಸರಕಾರಿ ವಿಜ್ಞಾನ ಕಾಲೇಜು ಇವರ ಸಹಯೋಗದಲ್ಲಿ ಎರಡು ದಿನದ ಕಾರ್ಯಾಗಾರವನ್ನು ಕಾಲೇಜು ಹೊಸ ಕಟ್ಟದಲ್ಲಿ ಏರ್ಪಡಿಸಲಾಗಿದೆ. ಉದ್ಘಾಟನೆಯನ್ನು ಶಾಸಕ ಎಚ್.ಎಸ್. ಪ್ರಕಾಶ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕರ್ನಾಟಕ ಗಾಂಧಿ ಸಂರಕ್ಷಣಾ ನಿಧಿ ಬೆಂಗಳೂರಿನ ಜಿ.ಬಿ. ಶಿವರಾಜು, ಎನ್.ಎಸ್.ಎಸ್. ಅಧಿಕಾರಿ ಡಾ. ಗಣನಾಥಶೆಟ್ಟಿ, ನಗರಸಭೆ ಅಧ್ಯಕ್ಷ ಹೆಚ್.ಎಸ್. ಅನೀಲ್ ಕುಮಾರ್, ಚಂದ್ರಶೇಖರ್ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮೊದಲನೇ ದಿನದ ಕಾರ್ಯಾಗಾರ ಬೆಳಗ್ಗೆ 9ಕ್ಕೆ ಪ್ರಾರಂಭವಾಗಲಿದೆ. ನಂತರ 10ಕ್ಕೆ ಕಾರ್ಯಕ್ರಮ ಉದ್ಘಾಟನೆ ಆಗಲಿದೆ. ಮೂರು ಅಧಿವೇಶನಗಳು ನಡೆಯಲಿದ್ದು, ಡಾ. ಸುಶಿಕಾಡನಕುಪ್ಪೆ ಇವರು ಪರಸ್ವರ ವ್ಯಕ್ತಿತ್ವ ಸಂಬಂಧಗಳು ಹಾಗೂ ಕ್ರಿಯಾತ್ಮಕ ಹಾಗೂ ನಿರ್ಗಾಯಕ ಚಿಂತನೆ ಎಂಬ ವಿಷಯಗಳ ಕುರಿತು ಚರ್ಚೆ ಮಾಡಲಿದ್ದಾರೆ. ಸ್ಮಿತಾ ಅವರು ವ್ಯಕ್ತಿಯಾಗಿ ತೀರ್ಮಾನ ಮಾಡುವಿಕೆ ಎಂಬ ವಿಷಯ ಚರ್ಚಿಸಲಿದ್ದಾರೆ ಎಂದರು.
ಎರಡನೆ ದಿನದ ಕಾರ್ಯಾಗಾರ ಬೆಳಗ್ಗೆ 9-30ಕ್ಕೆ ಪ್ರಾರಂಭವಾಗಲಿದೆ. ಲ್ಯಾನ್ಸಿಡಿಸೋಜಾ ಅವರು ಪರಿಣಾಮಕಾರಿಯಾಗಿ ಓದುವ ಹವ್ಯಾಸ ಹಾಗೂ ಸಂವಾಹನಾ ಕೌಶಲ್ಯ ಎಂಬ ವಿಷಯ ಚರ್ಚೆಗೆ ತರಲಿದ್ದಾರೆ. ಪ್ರಸನ್ನಕುಮಾರ ಅವರು ಸ್ವಯಂ ಹಾಗೂ ಸ್ವಯಂ ಅರಿವು ಹಾಗೂ ಒತ್ತಡ ನಿರ್ವಹಣೆ ಎಂಬ ವಿಷಯಗಳನ್ನು ಚರ್ಚೆ ಮಾಡುವರು. ಸಂಜೆ 5-30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪ ಭಾಷಣವನ್ನು ಎನ್ನೆಸ್ಸೆಸ್ ನಿವೃತ್ತ ಸಂಯೋಜನಾಧಿಕಾರಿ ಕೆ. ಕಾಳೇಗೌಡ ಮಾಡಲಿದ್ದಾರೆ. ಉಪವಿಭಾಗಧೀಕಾರಿ ಹೆಚ್.ಎಲ್. ನಾಗರಾಜು, ಎನ್.ಎಸ್.ಎಸ್. ಸಂಯೋಜನಾಧಿಕಾರಿ ಬಿ. ಚಂಧ್ರಶೇಖರ್ ಇತರರು ಭಾಗವಹಿಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎನ್ನೆಸ್ಸೆಸ್ ಅಧಿಕಾರಿ ಸಿ.ಎಸ್. ಮೋಹನ್, ಎಚ್.ಕೆ. ಸೌಮ್ಯ, ಆಂತರಿಕ ಗುಣಮಟ್ಟ ಕೊಶ ಸಂಚಾಲಕ ಅಬ್ದುಲ್ ರಹಿಮಾನ್ ಹಾಗೂ ಮಹೇಶಪ್ಪ ಉಪಸ್ಥಿತರಿದ್ದರು.







