ವಿಶ್ವಾಸಮತ ಸಾಬೀತುಪಡಿಸಲು ಹೈಕೋರ್ಟ್ ಮೆಟ್ಟಿಲೇರಿದ ದಿನಕರನ್ ಬಣ

ಚೆನ್ನೈ, ಸೆ. 14: ತಮಿಳುನಾಡು ವಿಧಾನ ಸಭೆಯಲ್ಲಿ ಬಹುಮತ ಸಾಬೀತುಪಡಿಸುಂತೆ ಕೋರಿ ಎಐಎಡಿಎಂಕೆಯ ಟಿಟಿವಿ ದಿನಕರನ್ ಬಣ ಗುರುವಾರ ಮದ್ರಾಸ್ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ.
ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಅವರನ್ನು ಉಚ್ಚಾಟಿಸುವಂತೆ ಹಾಗೂ ವಿಧಾನ ಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಕೋರಿ ಸಲ್ಲಿಸಲಾದ ಮನವಿಯ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ತಮಿಳುನಾಡು ರಾಜ್ಯಪಾಲ ಚಿ. ವಿದ್ಯಾಸಾಗರ್ ರಾವ್‌ಗೆ ಕಳೆದ ವಾರ ಆಗ್ರಹಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
21 ಶಾಸಕರ ಬೆಂಬಲ ಹೊಂದಿರುವ ದಿನಕರನ್, ವಿಧಾನಸಭೆಯಲ್ಲಿ ಪಳನಿಸ್ವಾಮಿ ಬಹುಮತ ಸಾಬೀತುಪಡಿಸಲು ನಿರ್ದೇಶಿಸುವಂತೆ ರಾಜ್ಯಪಾಲರನ್ನು ಆಗ್ರಹಿಸಿದ್ದರು. ಅವರಿಗೆ ಬಹುಮತ ಇಲ್ಲ ಎಂಬುದಕ್ಕೆ ಇದು ಸಾಕ್ಷಿ. ಆದುದರಿಂದ ಅವರು ಬಹುಮತ ಸಾಬೀತುಪಡಿಸುವಂತೆ ಹೇಳಬೇಕು. ಅಪೇಕ್ಷೆಯನ್ನು ಪೂರೈಸುವಷ್ಟು ಶಾಸಕರ ಬೆಂಬಲ ಇಲ್ಲ ಎಂಬ ಅರಿವು ಪಳನಿಸ್ವಾಮಿ ಬಣಕ್ಕೆ ಇದೆ ಎಂದು ಅವರು ಹೇಳಿದರು.
ವಿಧಾನಸಭೆಯ ಒಟ್ಟು 234 ಸದಸ್ಯರಲ್ಲಿ ಸ್ಪೀಕರ್ ಸೇರಿದಂತೆ ಎಐಎಡಿಎಂಕೆ 135 ಸ್ಥಾನ ಹೊಂದಿದೆ. ಡಿಎಂಕೆ 89, ಕಾಂಗ್ರೆಸ್ 8 ಹಾಗೂ ಐಯುಎಂಎಲ್ ಓರ್ವ ಸೇರಿದಂತೆ ವಿರೋಧ ಪಕ್ಷ 98 ಸ್ಥಾನ ಹೊಂದಿದೆ.







