ಶೀಘ್ರದಲ್ಲಿ ದೇವೇಗೌಡರೊಂದಿಗೆ ಪ್ರಧಾನಿ ಭೇಟಿಗೆ ನಿಯೋಗ: ಎಚ್.ಡಿ. ರೇವಣ್ಣ
.jpg)
ಹಾಸನ, ಸೆ.14: ಮುಂದಿನ ವರ್ಷ ನಡೆಯಲಿರುವ ಶ್ರವಣಬೆಳಗೊಳ ಮಹಾಮಸ್ತಾಭಿಷೇಕಕ್ಕೆ ಹಣದ ಕೊರತೆ ನಿವಾರಿಸಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೊಂದಿಗೆ ಶೀಘ್ರದಲ್ಲೆ ಪ್ರಧಾನಿ ಭೇಟಿ ಮಾಡಲು ನಿಯೋಗ ತೆರಳುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೇ ತೆರಳುವ ನಿಯೋಗದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಜೊತೆಯಲ್ಲಿ ಇದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಬಂಧಪಟ್ಟ ಸಚಿವರುಗಳನ್ನು ಕಂಡು ಶ್ರವಣಬೆಳಗೊಳ ಮಹಾಮಸ್ತಾಭಿಷೇಕಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸುವುದಾಗಿ ಹೇಳಿದರು.
ಮಹಾಮಸ್ತಾಭಿಷೇಕ ಹತ್ತಿರವಿದ್ದರೂ ಇನ್ನು ಕಾಮಗಾರಿ ಪೂರ್ಣಗೊಂಡಿರುವುದಿಲ್ಲ. ಜೊತೆಗೆ ಮುಖ್ಯಮಂತ್ರಿಯನ್ನು ಕೂಡ ಭೇಟಿ ಮಾಡಿ ಮನವಿ ಮಾಡಲಾಗುವುದು. 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಾಭಿಷೇಕ ಕಾಮಗಾರಿ ವಿಚಾರದಲ್ಲಿ ಇದುವರೆಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಾಗಲಿ ಸಚಿವರಾಗಲಿ ಇದುವರೆಗೂ ಜಿಲ್ಲೆಗೆ ಭೇಟಿ ನೀಡಿ ಯಾವುದೇ ಸಭೆ ಸಭೆಗಳನ್ನು ನಡೆಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳೇ ಅಡಿಗಲ್ಲು ಹಾಕಿರುವ ಕಾಮಗಾರಿಗಳು ಇನ್ನೂ ಪ್ರಾರಂಭವಾಗಿಲ್ಲ ಆದ್ದರಿಂದ ಸ್ವಾಮೀಜಿಗೆ ಕೆಲಸದ ಬಗ್ಗೆ ಆತಂಕ ವ್ಯಕ್ತವಾಗುತ್ತಿದ್ದು, ಆದ್ದರಿಂದ ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಕಾಮಗಾರಿಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಾನು ಕೂಡ ಮಹಾಮಸ್ತಾಭಿಷೇಕದ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರ್ಕಾರ ಇದರ ಬಗ್ಗೆ ಯಾವುದೇ ರೀತಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಜಿಲ್ಲೆಯಲ್ಲಿ ಹಲವು ರಸ್ತೆಗಳ ಕಾಮಗಾರಿ ಬಗ್ಗೆ ಈಗಾಗಲೇ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಜೊತೆಗೆ ನಗರದ ಎನ್.ಆರ್. ವೃತ್ತದಿಂದ ಹಾಗೂ ಚನ್ನಪಟ್ಟಣ ರಸ್ತೆವರೆಗೂ ಫ್ಲೈಓವರ್ ನಿರ್ಮಾಣಕ್ಕೆ ಕೂಡ ಮನವಿ ಮಾಡಲಾಗಿದೆ ಎಂದರು ಪಿಡಬ್ಲ್ಯುಡಿ ಸಚಿವರು ಜಿಲ್ಲೆಯಲ್ಲೇ ಠಿಕ್ಕಾಣಿ ತಿಕ್ಕಿ ಗುರಿ ಮಹಾಮಸ್ತಾಭಿಷೇಕ ಕಾರ್ಯ ಮುಗಿಯುವವರೆಗೂ ಎಲ್ಲ ಅಭಿವೃದ್ಧಿ ಕಾರ್ಯಗಳ ಬಗ್ಗೆ ತೀವ್ರ ನಿಗಾವಹಿಸಬೇಕು. ಅಲ್ಲದೆ ಗುತ್ತಿಗೆ ಒಬ್ಬೊಬ್ಬರಿಗೆ ಆಗುವುದಕ್ಕಿಂತ ಅದನ್ನು ವಿಭಾಗಿಸಿ ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ಹಲವರಿಗೆ ಟೆಂಡರ್ ನೀಡಬೇಕು ಎಂದು ಸಲಹೆ ನೀಡಿದರು.
ಮಹಾಮಸ್ತಾಭಿಷೇಕದ ಕಾಮಗಾರಿ ವಿಳಂಬದ ಬಗ್ಗೆ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗೆ ತೀವ್ರ ಆತಂಕವಾಗಿದೆ. ಕೂಡಲೇ ರಾಜ್ಯ ಸರಕಾರ ಎಚ್ಚೆತ್ತುಕೊಂಡು ಶೀಘ್ರ ಕ್ರಮಕೈಗೊಳ್ಳುವ ಮೂಲಕ ಕಾಮಗಾರಿ ಮಾಡಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಚ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಎಪಿಎಂಸಿ ಅಧ್ಯಕ್ಷ ಲಕ್ಷ್ಮಣ್ ಇದ್ದರು.







