ಇತರ ಭಾಷೆಗಳಿಗೆ ಗೌರವ ನೀಡಿ: ರಾಮನಾಥ್ ಕೋವಿಂದ್

ಹೊಸದಿಲ್ಲಿ, ಸೆ. 14: ದೇಶಾದ್ಯಂತ ಹಿಂದಿಯನ್ನು ಹೆಚ್ಚು ಜನಪ್ರಿಯಗೊಳಿಸುವ ಪ್ರಯತ್ನವಾಗಿ ಪ್ರಾದೇಶಿಕ ಭಾಷೆ ಹಾಗೂ ಅದನ್ನು ಮಾತನಾಡುವ ಜನರಿಗೆ ಹೆಚ್ಚು ಅವಕಾಶ ಹಾಗೂ ಗೌರವ ನೀಡಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ಹಿಂದಿ ಮಾತನಾಡುವ ಜನರಲ್ಲಿ ವಿನಂತಿಸಿದ್ದಾರೆ.
ಇಲ್ಲಿ ಹಿಂದಿ ದಿವಸ್ ಉತ್ಸವದ ಸಮಾರಂಭದಲ್ಲಿ ಮಾತನಾಡಿದ ರಾಷ್ಟ್ರಪತಿ, ಹಲವು ದಶಕಗಳಿಂದ ಹಿಂದಿ ಆಡಳಿತ ಭಾಷೆಯಾಗಿದ್ದರೂ ದೇಶದ ಕೆಲವು ಭಾಗಗಳಲ್ಲಿ ಹಿಂದಿಗೆ ತೀವ್ರ ವಿರೋಧ ವ್ಯಕ್ತವಾಗಿದೆ ಎಂದರು.
ಸಮಾರಂಭದಲ್ಲಿ ಹಾಜರಿದ್ದ ಗೃಹ ಸಚಿವ ರಾಜನಾಥ್ ಸಿಂಗ್ ಹಿಂದಿ ಭಾಷೆ ಮಾತನಾಡುವವರು ಇತರ ಭಾಷೆಯ ಪದ ಬಳಸಿದರೆ ಹಿಂದಿ ಭಾಷೆ ಬೆಳವಣಿಗೆ ಹೊಂದುತ್ತದೆ ಎಂದರು.
ಕನ್ನಡ ಪರ ಜನರು ರೈಲ್ವೆ ಸೇವೆಯಲ್ಲಿ ಹಿಂದಿ ನಾಮಫಲಕಗಳನ್ನು ಬಳಸಿರುವ ಇತ್ತೀಚೆಗಿನ ಬೆಂಗಳೂರು ಮೆಟ್ರೊ ಘಟನೆ ಹಾಗೂ ಈ ಹಿಂದೆ ತಮಿಳುನಾಡಿನಲ್ಲಿ ಹಿಂದಿ ವಿರುದ್ಧ ನಡೆದ ಪ್ರತಿಭಟನೆ ಉಲ್ಲೇಖಿಸಿದ ರಾಷ್ಟ್ರಪತಿ ಕೋವಿಂದ್, ಹಿಂದಿ ಹೇರಲಾಗುತ್ತದೆ ಎಂಬ ಭಾವನೆ ಕೆಲವು ಜನರಲ್ಲಿದೆ ಎಂದರು.
“ಹಿಂದಿಯೇತರ ಭಾಷೆ ಮಾತನಾಡುವ ಜನರಿಗೆ ತಮ್ಮ ಭಾಷೆ ಪ್ರಮುಖವಾಗಬೇಕು ಎಂಬ ನಿರೀಕ್ಷೆ ಇದೆ. ಆದುದರಿಂದ ಹಿಂದಿ ಮಾತನಾಡುವವರು ಇತರ ಭಾಷೆಗಳಿಗೆ ಅವಕಾಶ ನೀಡಬೇಕು. ಹಿಂದಿಯೇತರ ಭಾಷೆ ಮಾತನಾಡುವವರು ಹಾಗೂ ಪ್ರಾದೇಶಿಕ ಭಾಷೆಗೆ ನಾವೆಲ್ಲರೂ ಗೌರವ ನೀಡಬೇಕು” ಎಂದರು.
“ಹಿಂದಿ ಮಾತನಾಡುವವರು ಸ್ವಾಗತಿಸುವಾಗ ತಮಿಳರಲ್ಲಿ ವಣಕ್ಕಂ, ಸಿಕ್ಖ್‌ರಲ್ಲಿ ಸತ್ ಸ್ರಿ ಅಕಾಯಿ ಹಾಗೂ ಮುಸ್ಲಿಮರಲ್ಲಿ ಅದಾಬ್, ತೆಲುಗರಲ್ಲಿ ಗಾರು ಪದ ಬಳಸಿ” ಎಂದು ಕೋವಿಂದ್ ಸಲಹೆ ನೀಡಿದರು.







