ನಿಯಂತ್ರಣ ತಪ್ಪಿದ ಕಾರು ಬೈಕ್‍ಗೆ ಢಿಕ್ಕಿ : ಮೂವರಿಗೆ ಗಾಯ
ಮೈಸೂರು, ಸೆ.14: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಬೈಕ್‍ಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಚಾಮರಾಜ ಜೋಡಿ ರಸ್ತೆಯಲ್ಲಿ ನಡೆದಿದೆ.
ಚಾಮರಾಜ ಮೊಹಲ್ಲಾದ ನಿವಾಸಿ ಕಾರು ಚಾಲಕ ವಾಸುದೇವ್, ದೇವರಾಜ ಮೊಹಲ್ಲಾ ನಿವಾಸಿ ಬೈಕ್ ಚಾಲಕ ಫರ್ದೀನ್ ಸೇರಿದಂತೆ ಮೂವರು ತೀವ್ರ ಗಾಯಗೊಂಡವರೆಂದು ಗುರುತಿಸಲಾಗಿದೆ.
ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಮುಂದೆ ಇದ್ದ ಬೈಕ್‍ಗೆ ಢಿಕ್ಕಿ ಹೊಡೆದು, ಮುಂದಿರುವ ಉದ್ಯಾನವನದ ಕಾಂಪೌಂಡ್‍ಗೆ ಗುದ್ದಿದೆ. ಈ ಅಪಘಾತದಲ್ಲಿ ಬೈಕ್ ಸವಾರ ಹಾಗೂ ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರನ್ನು ಚಾಲನೆ ಮಾಡಿಕೊಂಡು ತೆರಳುತ್ತಿದ್ದ ವಾಸುದೇವ್ ಅವರಿಗೆ ಸ್ವಾತಂತ್ರ್ಯ ಉದ್ಯಾನವನದ ಬಳಿ ನಿಯಂತ್ರಣ ತಪ್ಪಿದ್ದು, ಅದೇ ವೇಳೆ ಬೈಕ್‍ನಲ್ಲಿ ತೆರಳುತ್ತಿದ್ದ ಫರ್ದಿನ್‍ಗೆ ಡಿಕ್ಕಿ ಹೊಡೆದಿದೆ. ಅಲ್ಲದೇ ಕಾರು ಉದ್ಯಾನವನಕ್ಕೆ ನುಗ್ಗಿದ ಪರಿಣಾಮ ಕಾಂಪೌಂಡ್ ಗ್ರಿಲ್‍ಗಳು ಬಿದ್ದು ಕಾರು ಹಳ್ಳಕ್ಕೆ ಉರುಳಿದೆ ಎನ್ನಲಾಗಿದೆ.
ಕಾರು ಗುದ್ದಿದ ರಭಸಕ್ಕೆ ಬೈಕ್ ಸವಾರನ ಕಾಲು ಮುರಿದಿದ್ದರೆ, ಕಾರಿನಲ್ಲಿದ್ದ ಇಬ್ಬರಿಗೆ ತೀವ್ರ ಗಾಯಗಳಾಗಿವೆ. ಅಪಘಾತದಿಂದ ಗಾಯಗೊಂಡವರನ್ನು ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಕೆ.ಆರ್. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







