ಸರಕಾರಿ ಶಾಲಾ ವ್ಯವಸ್ಥೆ ಸುಧಾರಣೆಗೆ ಸ್ವಯಂ ಸೇವಾ ಸಂಸ್ಥೆಗಳ ಜತೆ ಒಪ್ಪಂದ: ಸಚಿವ ತನ್ವೀರ್ ಸೇಠ್

ತುಮಕೂರು, ಸೆ.14: ಸರಕಾರಿ ಶಾಲಾ ವ್ಯವಸ್ಥೆಯಲ್ಲಿ ಗುಣಮಟ್ಟವನ್ನು ಹೆಚ್ಚಿಸಲು ಅಝೀಂ ಪ್ರೇಮಜೀ ಪೌಂಡೇಶನ್ ಸೇರಿದಂತೆ ನಾಲ್ಕು ಸ್ವಯಂ ಸೇವಾ ಸಂಸ್ಥೆಗಳ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿಂದು ಸೆಂಟ್ರಲ್ ಮಜ್‍ಲೀಸ್-ಇ-ಶೂರಾ ಜಾಮೀಯಾ ಮಸೀದಿಯ ವತಿಯಿಂದ ನಿರ್ಮಾಣ ಮಾಡಲಾಗಿರುವ ಅಂಗಡಿ ಮಳಿಗೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತಿದ್ದ ಅವರು, ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ನಿಗಾವಹಿಸಲು, ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಸೇರಿದಂತೆ ಸರಕಾರಿ ಶಾಲಾ ವ್ಯವಸ್ಥೆಯಲ್ಲಿ ಹೆಚ್ಚಿನ ಗುಣಮಟ್ಟ ತರಲು ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ದಿಸೆಯಲ್ಲಿ ಬುಧವಾರ ನಾಲ್ಕು ಸ್ವಯಂಸೇವಾ ಸಂಸ್ಥೆಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಗಿದೆ ಎಂದರು.
ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಬಂದ ಐಸಿಟಿ-1, ಐಸಿಟಿ-2 ಹಾಗೂ ಐಸಿಟಿ-3 ಕಾರ್ಯಕ್ರಮಗಳು ರಾಜ್ಯದಲ್ಲಿ ವಿಫಲವಾಗಿವೆ.ಈ ಹಿನ್ನೆಲೆಯಲ್ಲಿ ಐಸಿಟಿ-1 ಮತ್ತು ಐಸಿಟಿ-2 ಕಾರ್ಯಕ್ರಮಗಳ ಬಗ್ಗೆ ತನಿಖೆ ನಡೆಸಲು ಈಗಾಗಲೇ ಆದೇಶಿಸಲಾಗಿದೆ. ಐಸಿಟಿ-3 ಕಾರ್ಯಕ್ರಮದ ಸಂಬಂಧ ಚೆನೈ ನ್ಯಾಯಾಲಯದಲ್ಲಿ ನಮ್ಮ ಮೇಲೆ ಹೂಡಿದ್ದ ದಾವೆ ವಜಾಗೊಂಡಿದೆ.7649 ಶಾಲೆಗಳಲ್ಲಿ ಮಕ್ಕಳಿಗೆ ಕಂಪ್ಯೂಟರ್ ಮತ್ತು ಪ್ರೊಜೆಕ್ಟರ್ ಮೂಲಕ ಶಿಕ್ಷಣ ನೀಡುವ ಕಾರ್ಯಕ್ರಮ ತಾಂತ್ರಿಕ ಕಾರಣಗಳಿಂದ ಹಿನ್ನಡೆಯಾಗಿದೆ.ಇದಕ್ಕೆ ಕಾರಣರಾದವರ ಮೇಲೆ ದಾವೆ ಹೂಡಿ ಸರಿಪಡಿಸುವ ಕಾರ್ಯಕ್ಕೆ ಮುಂದಾಗುವುದಾಗಿ ಸಚಿವರು ಸ್ಪಷ್ಟ ಪಡಿಸಿದರು.
ಶಿಕ್ಷಕರನ್ನು ಸಶಕ್ತರನ್ನಾಗಿ ಮಾಡುವುದು ಹಾಗೂ ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶವನ್ನು ಇಟ್ಟುಕೊಂಡು ಶಿಕ್ಷಕರಿಗೆ “ಗುರು ಚೇತನ” ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಇದರಲ್ಲಿ 8 ವಿಷಯಗಳಲ್ಲಿ 29 ವಿನ್ಯಾಸಗಳನ್ನು ರೂಪಿಸಲಾಗಿದೆ. ಮುಂದೆ 250 ವಿನ್ಯಾಸಗಳನ್ನು ಸಿದ್ಧಪಡಿಸಲಾಗುವುದು. ರಾಜ್ಯದ 1.67 ಲಕ್ಷ ಶಿಕ್ಷಕರಿಗೆ ಎಸ್‍ಎಂಎಸ್ ಮೂಲಕ ಯೂಸರ್ ನೇಮ್ ಹಾಗೂ ಪಾಸ್ ವರ್ಡ್‍ಗಳನ್ನು ಕಳುಹಿಸಲಾಗಿದೆ. ಪ್ರತಿಯೊಬ್ಬ ಶಿಕ್ಷಕ ತಮಗೆ ಆಸಕ್ತಿಯಿರುವ ನಾಲ್ಕು ವಿಷಯಗಳನ್ನು ಆರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ವಕ್ಫ್ ಆಸ್ತಿ ಮತ್ತು ಕಬರ್ ಸ್ತಾನ್‍ಗಳ ರಕ್ಷಣೆ: ಕಬರ್ ಸ್ತಾನ್‍ಗಳು ಅತಿಕ್ರಮಣವಾಗದಂತೆ ತಡೆಯಲು ಮುಂದಿನ ಐದು ವರ್ಷಗಳಲ್ಲಿ ಬೇಲಿ ಅಥವಾ ಕಾಂಪೌಂಡ್ ಹಾಕುವ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಗುವುದು. ಕಳೆದ ವರ್ಷ 1430 ಕಬರ್ ಸ್ತಾನ್ ಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಸಾಲಿನಲ್ಲಿ 603 ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ತುಮಕೂರು ಜಿಲ್ಲೆಗೆ 2014-15ರಲ್ಲಿ 20 ಲಕ್ಷ, 2015-16ರಲ್ಲಿ 27ಲಕ್ಷ, 2016-17 ರಲ್ಲಿ 1.86ಕೋಟಿ ನೀಡಲಾಗಿದೆ. 2017-18ರಲ್ಲಿ 6 ತಿಂಗಳಲ್ಲಿ 1.51ಕೋಟಿ ನೀಡಲಾಗಿದೆ ಎಂದರು.
ಮುಸ್ಲಿಂ, ಸಿಖ್, ಜೈನ್ ಸೇರಿದಂತೆ ಮತ್ತಿತರ ಅಲ್ಪಸಂಖ್ಯಾತರ ಸಮುದಾಯಗಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಶಾದಿ ಮಹಲ್ ನಿರ್ಮಾಣ, ವಿದ್ಯಾರ್ಥಿ ವೇತನ, ಮತ್ತಿತರ ಸೌಲಭ್ಯಗಳನ್ನು ಒದಗಿಸಿ ಆರ್ಥಿಕವಾಗಿ ಸಬಲರಾಗಲು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವರು ನುಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಕರ್ನಾಟಕ ವಕ್ಫ್ ಬೋರ್ಡ್‍ನ ಸಿಇಒ ಜುಲ್ಪಿಕರ್ ಉಲ್ಲಾ, ವಕ್ಫ್ ಸಲಹಾ ಸಮಿತಿ ಜಿಲ್ಲಾಧ್ಯಕ್ಷ ಇಕ್ಬಾಲ್ ಅಹ್ಮದ್, ನಗರಸಭೆಯ ಅಧ್ಯಕ್ಷೆ ನಳಿನಾ,ಉಪಾಧ್ಯಕ್ಷ ಅರುಣ್‍ಕುಮಾರ್, ತಹಶೀಲ್ದಾರ್ ಸಿ.ನಾಗರಾಜ್,ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮೆಹಬೂಬ್ ಪಾಷಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ. ಮಂಜುನಾಥ್ ಮತ್ತಿತರರು ಹಾಜರಿದ್ದರು.







