ತುಮಕೂರು: ಯುವ ಕಾಂಗ್ರೆಸ್ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆ

ತುಮಕೂರು, ಸೆ.14: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್‍ನ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶರತ್‍ಕುಮಾರ್ ಅವರ ನೇತೃತ್ವದಲ್ಲಿ ನಡೆಯಿತು.
ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕೇರಳ ರಾಜ್ಯದ ಶಾಸಕ ಶಫಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಇಮ್ತಿಯಾಝ್, ಪ್ರಸನ್ನಕುಮಾರ್, ಪದಾಧಿಕಾರಿಗಳಾದ ಗೀತಾ ರಾಜ್ಯಣ್ಣ ಅವರುಗಳು ಸಮ್ಮುಖದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯಿತು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಯುವಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಕೆಂಪರಾಜು, ಯುವ ಕಾಂಗ್ರೆಸ್ ಕಾರ್ಯಕರ್ತರಾಗಿ ಕೆಲಸ ಮಾಡಲು ಯಾವುದೇ ಗಾಢ್ ಪಾಧರ್‍ನ ಅಗತ್ಯವಿಲ್ಲ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದವರು ಯುವ ಕಾಂಗ್ರೆಸ್ ಸದಸ್ಯರಾಗಿ ಹಂತ ಹಂತವಾಗಿ ರಾಜಕೀಯದಲ್ಲಿ ಮೇಲೆರಬಹುದು. ಕನಕಪುರದ ಯಾವುದೋ ಮೂಲೆಯಲ್ಲಿದ್ದ ನಾನು ಇಂದು ರಾಜ್ಯ ಉಪಾಧ್ಯಕ್ಷನಾಗಿ, ತುಮಕೂರು ಜಿಲ್ಲೆಯ ಉಸ್ತುವಾರಿಯಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವೆಂದರೆ ಎಲ್ಲರನ್ನು ಒಳಗೊಂಡ ಪಕ್ಷ, ಜಾತಿ ಬಲ, ಹಣ ಬಲ, ಜನಬಲ ಎಲ್ಲವನ್ನು ಹೊಂದಿದ ನಾಯಕರಿದ್ದಾರೆ. ಆದರೆ ಚುನಾವಣೆಯಲ್ಲಿ ಇವುಗಳು ಅಷ್ಟಾಗಿ ನಡೆಯಲ್ಲ. ನಮ್ಮ ಕಾರ್ಯಕರ್ತೆರೇ ನಮ್ಮ ಆಸ್ತಿ. ಅವರು ಹೇಗೆ ಕೆಲಸ ಮಾಡುತ್ತಾರೆ ಎಂಬುದರ ಮೇಲೆ ಚುನಾವಣೆಯ ಸೋಲು, ಗೆಲುವು ನಿರ್ಧಾರ ಆಗತ್ತದೆ. ಆದ್ದರಿಂದ ಮುಂಬರುವ 2018 ವಿಧಾನಸಭಾ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಮಹತ್ವದ ಪಾತ್ರ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬೂತ್,ಬ್ಲಾಕ್ ಮತ್ತು ಪಂಚಾಯತ್ ಮಟ್ಟದ ಪದಾಧಿಕಾರಿಗಳನ್ನು ನೇಮಕ ಮಾಡಿ, ನಿರಂತರ ನಿಗಾವಹಿಸುವ ಮೂಲಕ ಪಕ್ಷವನ್ನು ಸಂಘಟಿಸುವಂತೆ ಜಿಲ್ಲಾಧ್ಯಕ್ಷರು ಹಾಗೂ ಇತರೆ ಪದಾಧಿಕಾರಿಗಳಿಗೆ ಕೆಂಪರಾಜು ಸಲಹೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಯುವ ಜನರು ರಾಜಕೀಯಕ್ಕೆ ಬರಬೇಕು ಎಂಬ ಉದ್ದೇಶದಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು 21ವರ್ಷಕ್ಕೆ ಇದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸಿದರು. ವಿಜ್ಞಾನ ತಂತ್ರಜ್ಞಾನದ ಮೂಲಕ ದೇಶ ಬೆಳೆಯಬೇಕು ಎಂದು ಕನಸು ಕಂಡು, ಕಾರ್ಯೋನ್ಮುಖರಾದರು. ಅದರ ಫಲವಾಗಿ ಬಾಹ್ಯಾಕಾಶ, ವಿಮಾನಯಾನ,ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಅದ್ವೀತಿಯವಾದುದ್ದನ್ನು ಸಾಧಿಸಿದೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶರತ್‍ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢವಾಗಿದೆ. ಹಾಗೆಯೇ ಯುವ ಕಾಂಗ್ರೆಸ್‍ನ್ನು ಎಲ್ಲಾ ತಾಲೂಕುಗಳಲ್ಲಿ ಬಲಪಡಿಸುವ ಕೆಲಸ ಆಗಬೇಕಾಗಿದೆ. ತಾಲೂಕು ಪದಾಧಿಕಾರಿಗಳನ್ನು ನೇಮಕ ಮಾಡುವಂತೆ ಯುವ ಕಾಂಗ್ರೆಸ್ ತಾಲೂಕು ಕಮಿಟಿಗಳ ಅಧ್ಯಕ್ಷರಿಗೆ ತಿಳಿಸಿದ್ದರೂ ಇದುವರೆಗೂ ಪಾವಗಡ ಹೊರತು ಪಡಿಸಿ ಇತರೆ ತಾಲೂಕುಗಳ ಪಟ್ಟಿ ಬಂದಿಲ್ಲ. ಅಲ್ಲದೆ ಕಾಂಗ್ರೆಸ್ ಶಾಸಕರಿಲ್ಲದ ಕಡೆ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸಮಿತಿ ನಿರ್ದೇಶನದಂತೆ ಪಾದೆಯಾತ್ರೆಗಳನ್ನು ಹಮ್ಮಿಕೊಳ್ಳಲು ಸಿದ್ದವಿದ್ದು, ಜಿಲ್ಲಾ ಸಮಿತಿಯಿಂದ 100 ಕಿ.ಮಿ. ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ಭರವಸೆ ನೀಡಿದರು.
ವೇದಿಕೆಯಲ್ಲಿ ರಾಜ್ಯ ಸಮಿತಿ ಸದಸ್ಯೆ ಗೀತಾ ರಾಜಣ್ಣ,ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅನಿಲ್,ಉಪಾಧ್ಯಕ್ಷ ಶಶಿ ಹುಲಿಕುಂಟೆ ಮಠ್ ಮತ್ತಿತರರು ಉಪಸ್ಥಿತರಿದ್ದರು.







