ಸೆ. 15ರಿಂದ ಕೇಂದ್ರದಿಂದ ಸ್ವಚ್ಛತಾ ಸೇವಾ ಆರಂಭ

ಹೊಸದಿಲ್ಲಿ, ಸೆ. 14: ಮೋದಿ ಸರಕಾರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಆಂದೋಲನದ ಮೇಲೆ ಇನ್ನಷ್ಟು ಬೆಳಕು ಬೀರಲು ಕೇಂದ್ರ ಸರಕಾರ ರಾಷ್ಟ್ರಾದ್ಯಂತ ಶುಕ್ರವಾರದಿಂದ ಎರಡು ವಾರಗಳ ಕಾಲ ಸ್ವಚ್ಛತಾ ಅಭಿಯಾನ ನಡೆಸಲಿದೆ.
ಈ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ‘ಸ್ವಚ್ಛತಾ ಹಿ ಸೇವಾ’ (ಸ್ವಚ್ಛತೆಯೇ ಸೇವೆ) ಎಂಬ ಹೆಸರಿಸಿದ್ದಾರೆ. ಕಾನ್ಪುರದ ಈಶ್ವರಿಗಂಜ್ ಗ್ರಾಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಕುಡಿಯುವ ನೀರು ಹಾಗೂ ನೈರ್ಮಲ್ಯೀಕರಣ ಸಚಿವಾಲಯ ಸಹಕಾರ ನೀಡಲಿದೆ. ಮಹಾತ್ಮಾ ಗಾಂಧಿ ಅವರ ಕನಸಾದ ಸ್ವಚ್ಛ ಭಾರತಕ್ಕೆ ಕೊಡುಗೆಯಾಗಿ ಈ ಕಾರ್ಯಕ್ರಮದಲ್ಲಿ ಶ್ರಮದಾನ, ಸಾಮೂಹಿಕ ಕ್ರೋಢೀಕರಣ, ಜನ ಆಂದೋಲನದ ಮರು ಜಾರಿ ಮೊದಲಾದ ವಿಚಾರಗಳ ಮೇಲೆ ಗಮನ ಹರಿಸಲಿದೆ.
ನೈರ್ಮಲ್ಯೀಕರಣ ವಿವಿಧ ವಲಯಗಳೊಂದಿಗೆ ಸಂಪರ್ಕ ಹೊಂದಿದೆ. ಆರೋಗ್ಯದಿಂದ ಮಹಿಳೆಗೆ ಭದ್ರತೆ ಹಾಗೂ ಗೌರವ ನೀಡುವಲ್ಲಿಯವರೆಗೆ ನೈರ್ಮಲ್ಯೀಕರಣ ಪ್ರಾಮುಖ್ಯತೆ ಹೊಂದಿದೆ. ದೇಶದ ಆರ್ಥಿಕತೆ ಮೇಲೂ ನೈರ್ಮಲ್ಯೀಕರಣ ಪ್ರಭಾವ ಬೀರುತ್ತದೆ. ಯುನಿಸೆಫ್ ಪ್ರಕಾರ ಉತ್ತಮ ನೈರ್ಮಲ್ಯೀಕರಣ ದಿಂದ ವರ್ಷಕ್ಕೆ ಪ್ರತೀ ಕುಟುಂಬ 50 ಸಾವಿರ ರೂಪಾಯಿ ಉಳಿಸಲು ಸಾಧ್ಯ ಎಂದು ಕುಡಿಯುವ ನೀರು ಹಾಗೂ ನೈರ್ಮಲ್ಯೀಕರಣ ಸಚಿವಾಲಯದ ಕಾರ್ಯದರ್ಶಿ ಪರಮೇಶ್ವರನ್ ಐಯ್ಯರ್ ಹೇಳಿದ್ದಾರೆ.





