ವಿಜ್ಞಾನಿಗಳ ಬದಲು ಬಾಬಾ, ಜ್ಯೋತಿಷಿಗಳು ಹೆಚ್ಚುತ್ತಿದ್ದಾರೆ: ಬಂಜಗೆರೆ ಜಯಪ್ರಕಾಶ್
ಶಿವಮೊಗ್ಗ, ಸೆ.14: 'ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಪರಿಣಾಮವಾಗಿ ವಿಜ್ಞಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ತಂತ್ರಜ್ಞರು ಹೆಚ್ಚುತ್ತಿದ್ದಾರೆ. ಆಡಳಿತ ನಿರ್ವಹಣೆ ಮತ್ತು ವ್ಯಾಪಾರ ನಿರ್ವಹಣೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜ್‍ಗಳಿಂದ ಹೊರಬರುತ್ತಿದ್ದಾರೆ. ಅನ್ವಯಿಕ ವಿಜ್ಞಾನ ಮರೆಯಾಗುತ್ತಿದೆ. ವಾಣಿಜ್ಯ ಪದವಿಗಳಿಗೆ ಮಾತ್ರ ಭಾರೀ ಬೆಲೆ ಬರುತ್ತಿದೆ. ಕಲಾ ವಿಭಾಗ ಮುಚ್ಚುವ ಹಂತಕ್ಕೆ ಬರುತ್ತಿದೆ' ಎಂದು ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ತಿಳಿಸಿದ್ದಾರೆ.
ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜ್‍ನಲ್ಲಿ ಗುರುವಾರ ವಿಜ್ಞಾನ ಪರಿಷತ್ ಕಾರ್ಯಕ್ರಮ ಉದ್ಘಾಟಿಸಿದ ನಂತರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಎಲ್ಲಿಯವರೆಗೆ ವಿಜ್ಞಾನಿಗಳ ಸಂಖ್ಯೆಯನ್ನು ನಾವು ಹೆಚ್ಚಿಸುವುದಿಲ್ಲವೋ, ಅಲ್ಲಿಯವರೆಗೆ ವಿದೇಶಿ ವಿನಿಮಯ ಉಳಿತಾಯ ಮಾಡಲು ಸಾಧ್ಯವಿಲ್ಲ. ಹೊರದೇಶದ ತಂತ್ರಜ್ಞಾನದೊಂದಿಗೆ ನಮ್ಮ ದೇಶದಲ್ಲಿ ಉತ್ಪಾದಿಸುವ ಕಲೆ ಮಾತ್ರ ನಮಗೆ ಗೊತ್ತು. ಆದರೆ, ನಮ್ಮ ವಿಜ್ಞಾನಿಗಳಿಗೆ ಬೆಲೆ ಕೊಡುವುದು ಗೊತ್ತಿಲ್ಲ. ವಿಜ್ಞಾನಿಗಳ ಬದಲು ಬಾಬಾಗಳು ಮತ್ತು ಜ್ಯೋತಿಷಿಗಳು ಹೆಚ್ಚುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಆಲೋಚನಾತ್ಮಕವಾದ ಮನಸ್ಥಿತಿಯನ್ನು ಅಳವಡಿಸಿಕೊಳ್ಳಬೇಕು. ವಿಚಾರ ಮಾಡದೇ ಸುಮ್ಮನೆ ಕುಳಿತುಕೊಳ್ಳುವ ಬದಲು ಏನನ್ನಾದರೂ ಕಲಿಯುವ, ಪರಿಶೀಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಂಸ್ಕೃತಿಯನ್ನು ಬೆಳೆಸಲು ಆಲೋಚನೆ ಅವಶ್ಯಕ. ಕೇವಲ ನಂಬಿಕೆ ಅಥವಾ ಹೇಳಿಕೆಯಿಂದ ಸಂಸ್ಕೃತಿಯನ್ನು ಬೆಳೆಸಲು ಸಾಧ್ಯವಿಲ್ಲ. ವಿಚಾರಿಸುವುದನ್ನು ಅಥವಾ ಪರಿಶೀಲಿಸುವುದನ್ನು ಸದಾ ಮುಂದುವರೆಸುವ ಮೂಲಕ ಹೊಸ ಚಿಂತನೆಗಳಿಗೆ ನಾಂದಿ ಹಾಡಬೇಕೆಂದು ಹೇಳಿದರು.
ವಿಜ್ಞಾನದಿಂದ ಜ್ಞಾನ ಪಡೆದು ಸಂಸ್ಕೃತಿಗೆ ಜೋಡಿಸುವ ಕೆಲಸ ಆಗಬೇಕು. ವಿಜ್ಞಾನ ಒಂದು ವಿಚಾರಶೀಲತೆ. ವಿಚಾರಶೀಲತೆ ಒಂದು ಮನೋಭಾವ. ಸಂಸ್ಕೃತಿ, ಧರ್ಮ ಮತ್ತು ಪರಂಪರೆಯಲ್ಲಿ ಏನೇ ಹೇಳಿದರೂ ವೈಜ್ಞಾನಿಕ ತಳಹದಿಯಲ್ಲಿ ಅದು ಇದ್ದರೆ ಮಾತ್ರ ಅದು ಸಾರ್ಥಕವಾಗಲಿದೆ ಎಂದರು.
ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯ ಜಿ.ಎಸ್.ಚಂದ್ರಮೌಳಿ ವಹಿಸಿದ್ದರು. ಶಿವಮೊಗ್ಗ ಮಹಾಪೌರ ಏಳುಮಲೈ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿಜ್ಞಾನ ಪರಿಷತ್‍ನ ನೂತನ ಪದಾಧಿಕಾರಿಗಳಿಗೆ ಅಧಿಕಾರ ಬೋಧಿಸಲಾಯಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ವಿಜ್ಞಾನ ವಿಭಾಗದಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಕೆ.ಎಚ್. ಪಾಂಡುರಂಗನ್, ವಾಣಿಜ್ಯ ಕಾಲೇಜಿನ ಪ್ರಾಚಾರ್ಯೆ ಎಚ್.ಎಂ. ವಾಗ್ದೇವಿ, ವಿಜ್ಞಾನ ಪರಿಷತ್‍ನ ಕಾರ್ಯದರ್ಶಿ ಪ್ರೊ.ಎಸ್. ಶ್ಯಾಮಸುಂದರ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ. ಚಂದ್ರಪ್ಪ ಉಪಸ್ಥಿತರಿದ್ದರು.







